ಡೈಲಿ ವಾರ್ತೆ:22 ಜನವರಿ 2023

ಕುಂದಾಪುರ: ನೂತನ ಮೊಗವೀರ ಭವನ ಲೋಕಾರ್ಪಣೆ

ಕುಂದಾಪುರ : ಜನ ಸಂಘಟನೆಗೆ ರಾಜಕೀಯ ಅಧಿಕಾರ ಬೇಡ, ಇಚ್ಚಾಶಕ್ತಿ ಇದ್ದರೆ ಸಾಕು. ಡಾ. ಜಿ. ಶಂಕರ್ ಮೊಗವೀರ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ಶಕ್ತಿ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ನಗರದ ಚಿಕ್ಕನ್ ಸಾಲ್ ರಸ್ತೆಯಲ್ಲಿ ನಿರ್ಮಾಣಗೊಂಡ ಮೊಗವೀರ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೀನುಗಾರಿಕೆ ವೃತ್ತಿಯನ್ನವಲಂಬಿಸಿರುವ ಮೊಗವೀರ ಜನಾಂಗದವರು ಸಾತ್ವಿಕ ವ್ಯಕ್ತಿತ್ವದವರು. ಇತೀಚೆಗೆ ಬೇರೆಬೇರೆ ಕ್ಷೇತ್ರಗಳಲ್ಲೂ ಪ್ರಸಿದ್ಧರಾಗುತ್ತಿದ್ದಾರೆ. ವಿದ್ಯೆಗೆ ಹೆಚ್ಚು ಮಹತ್ವ ನೀಡಿ ಎಂದು ಅವರು ಕರೆ ನೀಡಿದರು.

ಭವನದ ಸುಸಜ್ಜಿತ ಪಾಕಶಾಲೆಯನ್ನು ಉದ್ಘಾಟಿಸಿದ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಶುಭ ಹಾರೈಸಿ, ಕರಾವಳಿಯ ಭಾಗದಲ್ಲಿ ಮೊಗವೀರ ಸಮುದಾಯದವರ ದೇವಾಲಯಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ಮೊಗವೀರ ಸಮಾಜವನ್ನೇ ಉನ್ನತ ಸ್ಥಿತಿಗೆ ತಂದವರು ಜಿ. ಶಂಕರ್ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮೊಗವೀರ ಬಂಧುಗಳಲ್ಲಿ ಸಂಘಟನಾತ್ಮಕ ಶಕ್ತಿ ಇನ್ನಷ್ಟು ಹೆಚ್ಚಾಬೇಕು. ದಕ್ಷಿಣ ಭಾರತದ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ಕ್ಷೇತ್ರವಾದ ಉಚ್ಚಿಲವನ್ನು ಕೇಂದ್ರೀಕರಿಸಿ ಶಿರೂರಿನಿಂದ ಉಪ್ಪಳದವರೆಗಿನ ಸಮಾಜ ಬಾಂಧವರು ಅಭಿವೃದ್ಧಿ ಸಾಧಿಸಬೇಕು ಎಂದು ಕರೆ ನೀಡಿದರು.



ನೂತನ ಮೊಗವೀರ ಭವನ ನಿರ್ಮಾಣದಲ್ಲಿ ದೇಣಿಗೆ ನೀಡಿದವರು ಮತ್ತು ಸಹಕರಿಸಿದವರನ್ನು ಸನ್ಮಾನಿಸಲಾಯಿತು.
ಮಂಗಳೂರು ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ಉಚ್ಚಿಲದ ದ. ಕ. ಮೊಗವೀರ ಮಹಾಜನಾ ಸೇವಾ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್, ಚಿನ್ಮಯಿ ಆಸ್ಪತ್ರೆಯ ನಿರ್ದೇಶಶಕ ಡಾ. ಉಮೇಶ್ ಪುತ್ರನ್, ಗೀತಾನಂದ ಫೌಂಡೇಷನ್ ಪ್ರವರ್ತಕ ಉದ್ಯಮಿ ಆನಂದ ಸಿ. ಕುಂದರ್ ಶುಭ ಹಾರೈಸಿದರು.



ಮಾಜಿ ಶಾಸಕ ಗೋಪಾಲ್ ಪೂಜಾರಿ, ಬಾರ್ಕೂರು ಸಂಯುಕ್ತಸಭಾ ಅಧ್ಯಕ್ಷ ಸತೀಶ್ ಅಮೀನ್, ಉದ್ಯಮಿ ಗೋಪಾಲ್ ಎಸ್. ಪುತ್ರನ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ರಾಜೇಂದ್ರ, ಕುಂದಾಪುರ ಪುರಸಭಾ ಮುಖ್ಯ ಅಧಿಕಾರಿ ಮಂಜುನಾಥ ಆರ್., ರಾಜ್ಯ ಮತ್ತು ಹೊರ ರಾಜ್ಯಗಳ ಮೊಗವೀರ ಸಂಘಟನೆಗಳ ಮುಖ್ಯಸ್ಥರು, ಮುಂಬೈ ಕೇಂದ್ರದ ಅಧ್ಯಕ್ಷ ರಾಜು ಮೆಂಡನ್, ಗೌರವ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಂ. ನಾಯ್ಕ, ಕುಂದಾಪುರ ಶಾಖಾ ಕಾರ್ಯದರ್ಶಿ ಪ್ರಭಾಕರ ಎನ್. ಮೊಗವೀರ, ಸ್ತ್ರೀ ಶಕ್ತಿ ಸಂಘಟನೆಯವರು, ಗುರಿಕಾರರು ಉಪಸ್ಥಿತರಿದ್ದರು.

ಮೊಗವೀರ ಮಹಾಜನಾ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಗೌರವಾಧ್ಯಕ್ಷ ಸುರೇಶ ಆರ್. ಕಾಂಚನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮೊಗವೀರ ಭವನದ ಮಹಿಷಾಸುರಮರ್ದಿನಿ ಸಭಾಂಗಣ, ಅಮ್ಮ ಮಿನಿ ಹಾಲ್, ಅನ್ನಪೂರ್ಣೇಶ್ವರಿ ಭೋಜನಾಲಯ, ಕಚೇರಿ, ಲಿಫ್ಟ್ ವ್ಯವಸ್ಥೆಗಳನ್ನು ಗಣ್ಯ ಅತಿಥಿಗಳು ಉದ್ಘಾಟಿಸಿದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಪ್ರಸ್ತಾವನೆ ನುಡಿಗಳನ್ನಾಡಿ, ಇದುವರೆಗೆ ಹನ್ನೊಂದು ಮೊಗವೀರ ಭವನಗಳ ನಿರ್ಮಾಣವಾಗಿದೆ. ದೇವಾಲಯಗಳ ಅಭಿವೃದ್ಧಿಯಾಗಿದೆ. ಬೆಂಗಳೂರಿನಲ್ಲಿಯೂ ಶೀಘ್ರ ನೂತನ ಮೊಗವೀರ ಭವನ ನಿರ್ಮಿಸುವ ಯೋಜನೆ ಇದೆ. ಈ ಭವನಗಳು ಸಾಂಸ್ಕೃತಿಕ, ಕಲಾ ಕೇಂದ್ರಗಳೂ ಆಗಿ ಮೊಗವೀರ ಜನಾಂಗದ ಸಮಗ್ರ ಅಭಿವೃದ್ಧಿಯ ಕೇಂದ್ರಗಳಾಗಬೇಕು. ಸಂಘಟನೆಯ ನೇತಾರರು ಈ ದಿಸೆಯಲ್ಲಿ ಕಾರ್ಯಪ್ರವರ್ತಕರಾಗಬೇಕು ಎಂದು ಹೇಳಿದರು.

ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಸ್ವಾಗತಿಸಿದರು. ನಯನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.