ಡೈಲಿ ವಾರ್ತೆ: 29 ಜನವರಿ 2023

ಕುಂದಾಪುರ: ಶವ ಸಂಸ್ಕಾರಕ್ಕೆ ಸಂಚಾರಿ ಮೊಬೈಲ್ ಚಿತಾಗಾರ ಆರಂಭ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮುದೂರಿನಲ್ಲಿ ಕರ್ನಾಟಕದ ಮೊದಲ ಸಂಚಾರಿ ಚಿತಾಗಾರವನ್ನು ಆರಂಭಿಸಲಾಗಿದೆ ಎಂದು ವರದಿಯಾಗಿದೆ.

ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಗ್ರಾಮೀಣ ಭಾಗದ ಜನರ ಶವ ಸಂಸ್ಕಾರದ ಸಮಸ್ಯೆಗಳನ್ನು ಪರಿಹರಿಸಲು ಈ ನಿರ್ಧಾರವನ್ನು ಕೈಗೊಂಡಿದೆ.
ಮುದೂರು ಗ್ರಾಮದಲ್ಲಿ ಸುಮಾರು 600 ಮನೆಗಳಿದ್ದು, ಯಾರಾದರೂ ಮೃತಪಟ್ಟರೆ ಮೃತದೇಹವನ್ನು 40 ಕಿ.ಮೀ ದೂರದಲ್ಲಿರುವ ಕುಂದಾಪುರ ಸ್ಮಶಾನಕ್ಕೆ ಕೊಂಡೊಯ್ಯಬೇಕು. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ ಸೊಸೈಟಿಯು ಕೇರಳದ ಸಂಸ್ಥೆಯೊಂದರಿಂದ 5.8 ಲಕ್ಷ ರೂ. ವೆಚ್ಚದ ಮೊಬೈಲ್ ಚಿತಾಗಾರವನ್ನು ಖರೀದಿಸಿದೆ.

ದೇಹನ್ನು ಸುಡಲು 10 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬಳಸಲಾಗಿದೆ. ಇದರಿಂದ ಶವ ಎರಡು ಗಂಟೆಯೊಳಗೆ ಬೂದಿಯಾಗುತ್ತದೆ. ಸಾವಿನ ಮನೆಗೆ ಈ ವಾಹನ ಹೋಗಲಿದ್ದು, ಅಂತಿಮಸಂಸ್ಕಾರಕ್ಕೆ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ.

ವಾಹನದೊಳಗೆ ಮೃತದೇಹವನ್ನು ಇರಿಸಿ ಮಾಡಬೇಕಾದ ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಕೈಗೊಳ್ಳಬಹುದು. ದಹನ ಪ್ರಕ್ರಿಯೆಯಲ್ಲಿ ಹೊಗೆ ಅಥವಾ ದುರ್ವಾಸನೆ ಹೊರಹೊಮ್ಮುವುದಿಲ್ಲ. ಆರು ಅಡಿ ಉದ್ದದ ಮತ್ತು ಉಕ್ಕಿನಿಂದ ಮಾಡಲಾದ ಮೊಬೈಲ್ ಸ್ಮಶಾನವನ್ನು ಯಾರ ಮನೆ ಬಾಗಿಲಿಗೂ ಟ್ರಕ್‌ನಲ್ಲಿ ಸಾಗಿಸಬಹುದು ಎನ್ನಲಾಗಿದೆ.