

ಡೈಲಿವಾರ್ತೆ:18/ಮಾರ್ಚ್/2026


ಬೈಕ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದರೋಡೆ: ₹31 ಲಕ್ಷ ದೋಚಿದ ಗ್ಯಾಂಗ್ ಅಂದರ್ – ಒಳಗಣ್ಣಿನ ಪಾತ್ರ ಬಯಲು

ಬೆಂಗಳೂರು: ನಗರದಲ್ಲಿ ಬೈಕ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸಿದ್ದ ಗ್ಯಾಂಗ್‌ನ ಐವರು ಆರೋಪಿಗಳನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು ₹10 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ನಿಖಿಲ್, ಪ್ರಶಾಂತ್ ಅಲಿಯಾಸ್ ಪಿಂಕಿ, ಅರುಣ್ ಕುಮಾರ್, ಹರೀಶ್ ಮತ್ತು ರಕ್ಷಿತ್ ಎಂದು ಗುರುತಿಸಲಾಗಿದೆ.
ಇವರು ಫೆಬ್ರವರಿ 1ರಂದು ಶ್ರೀ ಕೈಲಾಸ್ ಎಂಬ ವ್ಯಕ್ತಿಯ ಮೇಲೆ ದಾಳಿ ನಡೆಸಿ ₹31,38,625 ಹಣವನ್ನು ದೋಚಿ ಪರಾರಿಯಾಗಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಕೈಲಾಸ್ ಅವರು ಉಡಾನ್ ಕಂಪನಿಗೆ ಸೇರಿದ ಹಣವನ್ನು ಕಲೆಕ್ಷನ್ ಮಾಡಿಕೊಂಡು ಬೈಕ್‌ನಲ್ಲಿ ಸಾಗುತ್ತಿದ್ದರು. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ಆರೋಪಿಗಳು ಹಿಂಬಾಲಿಸಿ, ಲಾಂಗ್‌ನಿಂದ ಹಲ್ಲೆ ನಡೆಸಿ ಹಣ ಹಾಗೂ ಬೈಕ್ ದೋಚಿ ಸ್ಥಳದಿಂದ ಪರಾರಿಯಾಗಿದ್ದರು.
ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿ ಪೊಲೀಸರು ಬಲೆ ಬೀಸಿದ್ದರು. ತನಿಖೆ ವೇಳೆ ಈ ದರೋಡೆಗೆ ಒಳಗಿನ ಮಾಹಿತಿ ಕಾರಣವಾಗಿರುವುದು ಬೆಳಕಿಗೆ ಬಂದಿದೆ.
ಉಡಾನ್ ಕಂಪನಿಯ ಸಿಬ್ಬಂದಿಯಾಗಿದ್ದ ರಕ್ಷಿತ್ ಈ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಪೊಲೀಸರು ತಿಳಿಸಿದ್ದಾರೆ.
ಕೈಲಾಸ್ ನಿತ್ಯ ಹಣ ಕಲೆಕ್ಷನ್ ಮಾಡುತ್ತಿದ್ದ ವಿಚಾರ ತಿಳಿದಿದ್ದ ರಕ್ಷಿತ್ ತನ್ನ ಸ್ನೇಹಿತರ ಜೊತೆಗೂಡಿ ದರೋಡೆ ಯೋಜನೆ ರೂಪಿಸಿ ಕೃತ್ಯ ಎಸಗಿದ್ದನು.
ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದು, ಪ್ರಕರಣದ ಸಂಬಂಧ ಇನ್ನಷ್ಟು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಡಿವೈಎಸ್ಪಿ ಮೋಹನ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಕೃಷ್ಣಕುಮಾರ್ ಮತ್ತು ಮಂಜುನಾಥ್ ಅವರ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.