ಡೈಲಿ ವಾರ್ತೆ:10 ಫೆಬ್ರವರಿ 2023

ಕಬಕ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೇಮಲತಾ ರೈ ಅವರಿಗೆ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ : ಕಬಕ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೇಮಲತಾ ರೈ ಅವರಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಮಾತನಾಡಿ ಕಳೆದ 37 ವರ್ಷಗಳಿಂದ ಪ್ರೇಮಲತಾ ರೈ ಅವರು ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಕಬಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರುಕ್ಮಯ್ಯ ಗೌಡ ಮಾತನಾಡಿ ನಿವೃತ್ತ ಪ್ರಾಂಶುಪಾಲರು ಕಾಲೇಜಿಗೆ ಸರ್ಕಾರದಿಂದ ತರಗತಿ ಕೊಠಡಿ, ರಸ್ತೆ ಡಾಂಬರೀಕರಣ, ಊರ ಪರವೂರಿನ ದಾನಿಗಳ ಸಹಕಾರದಿಂದ ಇತರ ಭೌತಿಕ ಪರಿಕರಗಳನ್ನು ಒದಗಿಸಲು ವಿಶೇಷ ಮುತುವರ್ಜಿ ವಹಿಸಿದ್ದಾರೆ ಎಂದರು.
ನಿವೃತ್ತ ಪ್ರಾಧ್ಯಾಪಕ ಚಂದ್ರಹಾಸ ರೈ ಶುಭ ಹಾರೈಸಿದರು.

ವನಿತಾ ಕೆ, ಅಶ್ಮಿತಾ, ಕವನ, ಜಯಲಕ್ಷ್ಮಿ, ಚಂದ್ರಿಕಾ, ಲತಾಶ್ರೀ, ಶ್ರೀಮತಿ ಜಯಲಕ್ಷ್ಮಿ, ಮಮತಾ, ಕಸ್ತೂರಿ, ಕಬಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸುಲೋಚನಾ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ನಿವೃತ್ತ ಪ್ರಾಂಶುಪಾಲೆ ಪ್ರೇಮಲತಾ ರೈ ಹಾಗೂ ಕೆ.ಜಯರಾಮ ರೈ ಅವರನ್ನು ಸನ್ಮಾನಿಸಲಾಯಿತು.
ಕಾಲೇಜು ಪ್ರಾಂಶುಪಾಲ ಶ್ರೀಧರ್ ರೈ ಸ್ವಾಗತಿಸಿದರು, ಪ್ರಾಧ್ಯಾಪಕರಾದ ವಿಜೇತಾ ವಂದಿಸಿ, ನಯನ ಕಾರ್ಯಕ್ರಮ ನಿರೂಪಿಸಿದರು.