ಡೈಲಿ ವಾರ್ತೆ:18 ಫೆಬ್ರವರಿ 2023

ಅವಾರ್ಡ್‌ ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದ ನಟ ಶಹನವಾಜ್ ಪ್ರಧಾನ್

ಮುಂಬಯಿ: ಹತ್ತಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ, ಬಾಲಿವುಡ್‌ ನಟ ಶಹನವಾಜ್ ಪ್ರಧಾನ್ (56) ಹೃದಯಾಘಾತದಿಂದ ಶುಕ್ರವಾರ ( ಫೆ.17 ರಂದು) ಮೃತಪಟ್ಟಿದ್ದಾರೆ.

ಮುಂಬಯಿನಲ್ಲಿ ನಡೆಯುತ್ತಿದ್ದ ಅವಾರ್ಡ್‌ ಕಾರ್ಯಕ್ರಮವೊಂದರಲ್ಲಿ ಶಹನವಾಜ್ ಪ್ರಧಾನ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಜೊತೆಗಿದ್ದವರ ಬಳಿ ಎದೆನೋವು ಆಗುತ್ತಿದೆ ಎಂದು ಹೇಳಿದ್ದರು. ಇದಾದ ಕೆಲವೇ ಕ್ಷಣದಲ್ಲಿ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ಅವರು ಬದುಕು ಬರಲು ಸಾಧ್ಯವಾಗಿಲ್ಲ. ಹಠಾತ್ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಬಾಲಿವುಡ್‌ ನ ʼಫ್ಯಾಂಟಮ್ʼ, ʼರಾಯೆಸ್ʼ, ʼಮಿರ್ಜಾಪುರ್ʼ, ʼಟೋಟಾ ವೆಡ್ಸ್ ಮೈನಾʼ ಮುಂತಾದ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಮಿರ್ಜಾಪುರ್ ವೆಬ್‌ ಸರಣಿಯಲ್ಲಿ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಅವರ ನಿಧನಕ್ಕೆ ಮಿರ್ಜಾಪುರ್‌ ನಟ ರಾಜೇಶ್ ತೈಲಂಗ್,ನಟ ಯಶಪಾಲ್ ಶರ್ಮಾ ಸೇರಿದಂತೆ ಹತ್ತಾರು ಮಂದಿ ಸಂತಾಪ ಸೂಚಿಸಿದ್ದಾರೆ.