ಡೈಲಿ ವಾರ್ತೆ:19 ಫೆಬ್ರವರಿ 2023

ನಾರಾಯಣಗುರು ನಿಗಮ ರಚನೆಯ ಜವಾಬ್ದಾರಿ ನನ್ನದು ಇನ್ನೆರಡು ದಿನಗಳಲ್ಲಿ ಘೋಷಣೆ: ಸಚಿವ ಕೋಟ

ಉಡುಪಿ: ನಾರಾಯಣ ಗುರು ನಿಗಮ ರಚನೆಯ ವಿಚಾರದಲ್ಲಿ ಯಾರಿಗೂ ಯಾವುದೇ ಆತಂಕ ಬೇಡ…. ಮನ್ನಿಸಿ.. ಇನ್ನೆರಡು ದಿನಗಳಲ್ಲಿ ನಿಗಮ ಘೋಷಿಸುತ್ತೇವೆ. ಜವಾಬ್ದಾರಿ ನನ್ನದು…. ಹೀಗೆಂದು ಇಂದು ಅಪರಾಹ್ನ ಟ್ವಿಟ್ ಮಾಡಿದವರು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ
ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ,

ಬಿಲ್ಲವ, ಈಡಿಗ ಸೇರಿದಂತೆ 26 ಉಪಪಂಗಡಗಳ ನಾರಾಯಣಗುರು ನಿಗಮ ರಚನೆ ಕುರಿತ ಬಹುದಿನಗಳ ಬೇಡಿಕೆ ಈ ಬಾರಿಯ ಬಜೆಟ್‌ನಲ್ಲೂ ಈಡೇರದ ಹಿನ್ನೆಲೆಯಲ್ಲಿ ಬಿಲ್ಲವ ಸಮಾಜ ಆಕ್ರೋಶಿತಗೊಂಡಿದ್ದು, ಇವರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಟ್ವಿಟರ್ ಮೂಲಕ ಮತ್ತೊಮ್ಮೆ ಭರವಸೆಯ ಮಾತುಗಳನ್ನಾಡಿದ್ದಾರೆ.

ತಿಂಗಳ ಹಿಂದೆ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಬಿಲ್ಲವ ಸಮಾಜದ ಗಣ್ಯರ ನಿಯೋಗವೊಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದಾಗ ಫೆಬ್ರವರಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು.

ಆದರೆ, ನಿನ್ನೆ ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್‌ನಲ್ಲಿ ನಿಗಮ ಘೋಷಣೆ ಆಗದೇ ಇರುವುದರಿಂದ ಇದೀಗ ಬಿಲ್ಲವ ಸಮುದಾಯ ತೀವ್ರ ಆಕ್ರೋಶಗೊಂಡಿದೆ. ಹೀಗಾಗಿ ಇಂದು ಸಚಿವರೇ ಖುದ್ದಾಗಿ ಟ್ವಿಟ್ ಮಾಡಿ ಎರಡೇ ದಿನಗಳಲ್ಲಿ ನಿಗಮ ಘೋಷಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಈ ಟ್ವಿಟ್‌ಗೆ ಪ್ರತಿಕ್ರಿಯಿಸಿರುವ ಸಾಕಷ್ಟು ಮಂದಿ, ಸಚಿವರು ನೀಡಿರುವ ಇನ್ನೂ ಹಲವು ಭರವಸೆಗಳ ಈಡೇರಿಕೆ ಯಾವಾಗ ಎಂಬ ಪ್ರಶ್ನೆಯನ್ನೆತ್ತಿದ್ದಾರೆ. ಗ್ರಾಮ ಪಂಚಾಯತ್ ನೌಕರರಿಗೆ ಕೊಟ್ಟ ಭರವಸೆ, ಕುಂಬಾರ ಸಮುದಾಯಕ್ಕೆ ನೀಡಿದ ಕುಂಭ ನಿಗಮದ ಘೋಷಣೆಯ ಭರವಸೆಯನ್ನು ನೆನಪಿಸಿದ್ದಾರೆ.