ಡೈಲಿ ವಾರ್ತೆ:24 ಏಪ್ರಿಲ್ 2023

ಸಾಲಿಕೇರಿಯ ದಶಾವತಾರ ಯಕ್ಷಶಿಕ್ಷಣ ಕೇಂದ್ರದಿಂದ ಯಕ್ಷಗಾನ ಕಾರ್ಯಾಗಾರ

ಬ್ರಹ್ಮಾವರ:“ಮನದ ಜಾಡ್ಯವನ್ನು ದೂರಮಾಡಬಲ್ಲ, ಆಂಗಿಕ, ಆಹಾರ್ಯ, ವಾಚಿಕ ಮತ್ತು ಸಾತ್ವಿಕ ಎಂಬ ಚತುರ್ವಿಧವಾದ ಅಭಿನಯಗಳಿಂದ ಕೂಡಿದ ಶ್ರೀಮಂತ ಕಲೆ ಯಕ್ಷಗಾನ. ಇಲ್ಲಿ ಕಣ್ಣಿಗೆ ಆಹ್ಲಾದ ನೀಡುವ ವೇಷಗಳಿವೆ, ಬುದ್ಧಿಗೆ ಆಹಾರ ಕೊಡುವ ಮೌಲಿಕವಾದ ಸಾಹಿತ್ಯವಿದೆ, ಕಿವಿಗೆ ರಸಾಸ್ವಾದವನ್ನು ನೀಡುವ ಸಂಗೀತವಿದೆ. ಹೃದಯವನ್ನು ಬೆಳಗುವ ಯಕ್ಷಗಾನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಒಬ್ಬ ಕಲಾವಿದರಾಗುವುದರ ಜೊತೆಗೆ ರುಚಿಶುದ್ಧಿಯುಳ್ಳ ಪ್ರಜ್ಞಾವಂತ ಪ್ರೇಕ್ಷರಾಗುವುದು ಮುಖ್ಯ” ಏಂದು ಕನ್ನಡ ಉಪನ್ಯಾಸಕ, ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕರಾದ ಸುಜಯೀಂದ್ರ ಹಂದೆ ಹೇಳಿದರು.
ಸಾಲಿಕೇರಿಯ ದಶಾವತಾರ ಯಕ್ಷಶಿಕ್ಷಣ ಕೇಂದ್ರ (ರಿ). ಬ್ರಹ್ಮಾವರದ ರೋಟರಿ ಸಮಾಜ ಭವನದಲ್ಲಿ ಎ. 22 ರಂದು ಆಯೋಜಿಸಿದ ಎರಡು ದಿನದ ಯಕ್ಷಗಾನ ಕಾರ್ಯಾಗಾರದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷಗಾನ ಪ್ರಾತ್ಯಕ್ಷಿಕೆಯಲ್ಲಿ ಹಂದೆಯವರು ಮಾತನಾಡಿದರು.

ಯಕ್ಷಗಾನದ ಇತಿಹಾಸ, ಬೆಳೆದು ಬಂದ ರೀತಿ, ಯಕ್ಷಗಾನದ ಒಳಹೊರಗು ಕುರಿತಂತೆ ಮಾತನಾಡಿದ ಹಂದೆಯವರು ಬಡಗು ತಿಟ್ಟಿನ ಬಾಲಗೋಪಾಲ, ಪೀಠಿಕಾ ಸ್ರೀವೇಷಗಳ ಕುಣಿತ ಸಹಿತ ಆಂಗಿಕಾಭಿನಯದ ವಿವಿಧ ತಾಳಗಳ ಪರಿಚಯ ಮಾಡಿಸಿದರು. ಪಾದ ಮತ್ತು ಹಸ್ತಗಳ ಸ್ಥಾನ ಮತ್ತು ವಿನ್ಯಾಸಗಳೊಂದಿಗೆ ಪಾತ್ರಾನುಸಾರವಾಗಿ ಪುರುಷ, ಸ್ತ್ರೀ, ಪುಂಡು, ಎರಡನೇ ವೇಷಗಳ ಕುಣಿತಗಳು ಹೊಂದುವ ವ್ಯತ್ಯಾಸವನ್ನು ನಿರೂಪಿಸಿದರು. ಪತಾಕ, ಅರ್ಧಪತಾಕ, ಸೂಚಿ, ಹಂಸಾಸ್ಯ, ಮುಷ್ಟಿ, ಸರ್ಪ, ಆಲಪದ್ಮ, ಮುಕುಳ, ಮೃಗಶಿರ ಮೊದಲಾದ ಹಸ್ತ ಮುದ್ರೆಗಳನ್ನು ವಿವಿಧ ಪ್ರಸಂಗದ ಪದ್ಯಗಳೊಂದಿಗೆ ಕುಣಿದು ತೋರಿಸಿದರು. ಶೃಂಗಾರ, ಹಾಸ್ಯ, ಕರುಣ, ವೀರ ಮೋದಲಾದ ನವರಸಗಳ ಅಭಿನಯವನ್ನು ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶಿಸಲಾಯಿತು.

ಭಾಗವತಿಕೆಯಲ್ಲಿ ನವೀನ ಕೋಟ, ಮದ್ದಳೆಯಲ್ಲಿ ಸ್ಕಂದ ಉರಾಳ, ಚಂಡೆಯಲ್ಲಿ ಸುದೀಪ ಉರಾಳ ಹಿಮ್ಮೇಳದಲ್ಲಿಯೂ ಮತ್ತು ಸುಹಾಸ ಕರಬ, ಶ್ರೀಜಿತ್ ಸೋಮಯಾಜಿ ಮುಮ್ಮೇಳದಲ್ಲಿಯೂ ಸಹಕರಿಸಿದರು.
ಯಕ್ಷ ಶಿಕ್ಷಣ ಕೇಂದ್ರದ ಅಧ್ಯಕ್ಷ ಶ್ರೀದರ ಶೆಟ್ಟಿಗಾರ ಅಧ್ಯಕ್ಷತೆವಹಿಸಿದ್ದರು.

ಹಿರಿಯ ಯಕ್ಷಗಾನ ಕಲಾವಿದರಾದ ಬಿರ್ತಿ ಬಾಲಕೃಷ್ಣ, ಪದ್ಮನಾಭ ಗಾಣಿಗ, ಉಪನ್ಯಾಸಕರಾದ ಶ್ರೀನಿವಾಸ ಸೋಮಯಾಜಿ ಉಪಸ್ಥಿತರಿದ್ದರು.

ಕಾರ್ತಿಕ್ ನಿರ್ವಹಿಸಿದರು. ಸುಮಾರು ನಲವತ್ತು ಮಂದಿ ಯಕ್ಷ ಶಿಕ್ಷಣ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯ ಫಲಾನುಭವಿಗಳಾದರು.