ಡೈಲಿ ವಾರ್ತೆ: 13/ಅ./2025

ಉಡುಪಿಯ ಸಾಂಸ್ಕೃತಿಕ ಹರಿಕಾರ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ 75ರ ಅಭಿನಂದನೆ

ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು, ಉಡುಪಿಯ ಸಾಂಸ್ಕೃತಿಕ ಹರಿಕಾರ ಎಂದೇ ಖ್ಯಾತರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ 75 ವರ್ಷ ತುಂಬಿದ ಹಿನ್ನಲೆಯಲ್ಲಿ ಅಭಿಮಾನಿಗಳಿಂದ ಅಭಿನಂದನಾ ಕಾರ್ಯಕ್ರಮ ಭಾನುವಾರ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ತಲ್ಲೂರ್ಸ್ ಕುಟುಂಬದ ಫ್ಯಾಮಿಲಿ ವೈದ್ಯ ಡಾ. ಆರ್.ಎನ್.ಭಟ್ ಅವರಿಗೆ ಜಾನಪದ ಶೈಲಿಯಲ್ಲಿ ಗೌರವಾರ್ಪಣೆ ನಡೆಯಿತು.

ವೈದ್ಯರತ್ನ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಡಾ.ಆರ್.ಎನ್. ಭಟ್, ಬಹಳ ವಿಶಿಷ್ಟ ರೀತಿಯಲ್ಲಿ ನಡೆದ ಈ ಸನ್ಮಾನದಿಂದ ಹೃದಯ ತುಂಬಿ ಬಂದಿದೆ. ಅತಿಥಿ ಸತ್ಕಾರ ಹೇಗೆ ಮಾಡಬೇಕು ಎಂಬುದನ್ನು ತಲ್ಲೂರು ಶಿವರಾಮ ಶೆಟ್ಟಿ ಅವರಿಂದ ಕಲಿಯಬೇಕು. ಅವರ ಸಮಾಜಮುಖಿ ಸೇವಾ ಕಾರ್ಯಗಳು ಹೀಗೆಯೇ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಲಯನ್ಸ್ ಹಿರಿಯ ಧುರೀಣ ಎನ್. ಎಂ. ಹೆಗಡೆ ಅವರು ಶುಭಾಶಂಸನೆಯಲ್ಲಿ ಡಾ.ತಲ್ಲೂರು ಶಿವರಾಮ ಶೆಟ್ರ ಜೀವನ ಸಾಧನೆಗಳು, ಅವರ ಸಾಮಾಜಿಕ ಸೇವಾ ಕಾರ್ಯಗಳ ಬಗ್ಗೆ ಪ್ರಸ್ತಾಪಿಸಿದರು. ತನ್ನ ಹುಟ್ಟೂರು ತಲ್ಲೂರು ಹೆಸರಿನಿಂದಲೇ ಖ್ಯಾತ ಉದ್ಯಮಿಗಳಾಗಿ ಗಳಿಸಿದ ಹಣದ ಒಂದoಶವನ್ನು ಸಮಾಜಸೇವೆಗೆ ಮುಡಿಪಾಗಿಟ್ಟಿರುವುದು ಅನುಕರಣೀಯ ಹಾಗೂ ಅನನ್ಯ ಎಂದರು.

ಲಯನ್ಸ್ನಲ್ಲಿ 35 ವರ್ಷಗಳಿಂದ ವಿವಿಧ ಹುದ್ದೆಗಳನ್ನು ಅಲಂಕರಿಸಿ 2018ರಲ್ಲಿ ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಸಿಯ ಗವರ್ನರ್ ಆಗಿ ಲಯನ್‌ಗಳಿಗೆ ಮಾದರಿಯಾಗಿದ್ದಾರೆ. ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ 7 ವರ್ಷಗಳ ಕಾಲ ಮುನ್ನಡೆಸಿ ವಿದ್ಯಾಪೋಷಕ್‌ನಂತಹ ಸಾಮಾಜಿಕ ಕಾರ್ಯಗಳನ್ನು ನಿಭಾಯಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿ ಜಾನಪದ ಕಲೆ, ಕಲಾವಿದರನ್ನು ಗುರುತಿಸುವ ಕಾರ್ಯ ಮಾಡಿದ್ದಾರೆ. 15 ವರ್ಷಗಳಿಂದ ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷರಾಗಿ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಇದೀಗ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಯಕ್ಷಗಾನ ಕಲೆಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಮಕ್ಕಳಲ್ಲಿ ನೈತಿಕ ಸಂಸ್ಕಾರವನ್ನು ಬೆಳೆಸುವ ನಿಟ್ಟಿನಲ್ಲಿ 400ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, 40,000ಕ್ಕೂ ಅಧಿಕ ನೈತಿಕ ಮೌಲ್ಯಗಳನ್ನು ಸಾರುವ ಪುಸ್ತಕಗಳನ್ನು ಹಂಚಿ ಸುಸಂಸ್ಕೃತ ಸಮಾಜ ನಿರ್ಮಾಣದ ಕನಸು ಕಂಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅವರ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಲಿ ಎಂದು ಶುಭ ಹಾರೈಸಿದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ಜೀವನ ಪ್ರೀತಿ ನಮಗೆಲ್ಲಾ ಆದರ್ಶಪ್ರಾಯವಾಗಿದೆ. ಬದುಕಿನ ಪ್ರತೀ ಕ್ಷಣವನ್ನು ಸಮಾಜಕ್ಕೆ ವಿನಿಯೋಗಿಸಿ ಅದರಲ್ಲಿಯೇ ಸಾರ್ಥಕತೆ ಪಡೆಯುತ್ತಿರುವ ತಲ್ಲೂರು ಅವರು ಮುಂದೆ ಜೀವನದ ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು.

ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಮಾತನಾಡಿ, ರಂಗಭೂಮಿಯನ್ನು ಕಟ್ಟಿದ ಆನಂದ ಗಾಣಿಗ ಅವರು ತನ್ನ ಕೊನೆಯ ಕಾಲದಲ್ಲಿ ಈ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಲು ತಲ್ಲೂರು ಶಿವರಾಮ ಶೆಟ್ಟಿ ಅವರು ಸಮರ್ಥರು ಎಂದು ಮನಗಂಡು ಅವರಿಗೆ ಅಧ್ಯಕ್ಷಗಿರಿಯನ್ನು ನೀಡಿದ್ದರು. ಅಂದಿನಿoದ ಇಂದಿನವರೆಗೆ ಸುಮಾರು 15 ವರ್ಷಗಳಿಂದ ಡಾ.ತಲ್ಲೂರು ಅವರ ನಾಯಕತ್ವದಲ್ಲಿ ಸಂಸ್ಥೆ ಸ್ವಂತ ನೆಲೆಯನ್ನು ಕಂಡುಕೊoಡಿದೆ, ಎತ್ತರಕ್ಕೇರಿದೆ. ಇದಕ್ಕೆ ಸಂಸ್ಥೆ ಡಾ.ತಲ್ಲೂರು ಅವರಿಗೆ ಚಿರ ಋಣಿಯಾಗಿದೆ. ಅವರು ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿದ್ದಾಗ ಮಕ್ಕಳಿಗೆ ಯಕ್ಷ ಶಿಕ್ಷಣವನ್ನು ಆರಂಭಿಸಿದರು. ಇದೀಗ ರಂಗಭೂಮಿ ಅಧ್ಯಕ್ಷರಾಗಿ ಮಕ್ಕಳಿಗೆ ರಂಗ ಶಿಕ್ಷಣವನ್ನು ಪ್ರಾರಂಭಿಸಿದ್ದಾರೆ. ಈ ವರ್ಷ 25 ಶಾಲೆಗಳಲ್ಲಿ ರಂಗ ಶಿಕ್ಷಣವನ್ನು ಪ್ರಾರಂಭಿಸಲಾಗಿದೆ. ಇದಕ್ಕೆ ಡಾ.ತಲ್ಲೂರು ಕಾರಣೀಭೂತರು. ಅಲ್ಲದೆ ಖ್ಯಾತ ಸಾಹಿತಿ ಅಂಬಾತನಯ ಮುದ್ರಾಡಿ ಅವರ ಸಂಸ್ಮರಣೆಯಲ್ಲಿ ನಾಟಕ ರಂಗದ ಸಾಹಿತ್ಯಿಕ ರಂಗದ ಪ್ರಶಸ್ತಿಯನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಡಾ.ತಲ್ಲೂರು ನೇತೃತ್ವದಲ್ಲಿ ಆರಂಭಿಸಲಾಗಿದೆ. ಅವರಲ್ಲಿ ಆಗೋದಿಲ್ಲ ಎಂಬ ಮಾತೇ ಇಲ್ಲ. ಅವರಂತೆ ಗುರಿಯನ್ನು ತಲುಪಬಲ್ಲ ಅಂತ: ಶಕ್ತಿ ನಮ್ಮಲ್ಲಿ ಬರಲಿ ಎಂದರು. ಯಥಾರಾಜ ತಥಾ ಪ್ರಜೆ ಎಂಬoತೆ ನಮಗೆ ಅವರಿಂದ ಇನ್ನಷ್ಟು ಮಾರ್ಗದರ್ಶನ ಸಿಗಲಿ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್ ಅವರು ಅಭಿನಂದನಾ ನುಡಿಗಳನ್ನಾಡಿ, ಜಾನಪದ ಪರಿಷತ್ತು ಇದೇ ಎಂಬುದನ್ನು ಜಿಲ್ಲೆಗೆ ತೋರಿಸಿ ಕೊಟ್ಟವರೇ ಡಾ.ತಲ್ಲೂರು ಅವರು. ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯಾದ್ಯಂತ ಹಲವಾರು ಜಾನಪದ ವೈಭವದಂತಹ ಕಾರ್ಯಕ್ರಮಗಳನ್ನು ಮಾಡಿದಲ್ಲದೆ ಜಾನಪದ ಕಲಾವಿದರನ್ನು ಗುರುತಿಸಿ, ತನ್ನ ಟ್ರಸ್ಟ್ನಿಂದ ಜಾನಪದ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವುದು ಜಾನಪದ ಲೋಕಕ್ಕೆ ಸಂಜೀವಿನಿ ನೀಡಿದಂತಾಗಿದೆ. ಅವರ ಈ ಸೇವಾ ಕಾರ್ಯಗಳು ಇನ್ನಷ್ಟು ಕಾಲ ಮುಂದುವರಿಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಡಾ. ತಲ್ಲೂರು ಅವರ ಧರ್ಮಪತ್ನಿ ಗಿರಿಜಾ ಶಿವರಾಮ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಎಸ್ ಶೆಟ್ಟಿ, ಪ್ರೇಮಲತಾ ನಿತ್ಯಾನಂದ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಹೇಮಲತಾ ಸುನಿಲ್ ಕುಮಾರ್ ಶೆಟ್ಟಿ, ಸುನಿಲ್ ಕುಮಾರ್ ಶೆಟ್ಟಿ, ಡಾ. ಅನ್ನಪೂರ್ಣೇಶ್ವರಿ ಸಂದೇಶ್ ಕುಮಾರ್ ಶೆಟ್ಟಿ, ಡಾ. ಸಂದೇಶ್ ಕುಮಾರ್ ಶೆಟ್ಟಿ, ಸೌಜನ್ಯ ಎಸ್. ಶೆಟ್ಟಿ
ಅಥರ್ವ್ ಎಸ್. ಶೆಟ್ಟಿ, ಅಂಕಿತ್ ಎಸ್. ಶೆಟ್ಟಿ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.