ಡೈಲಿ ವಾರ್ತೆ:04 ಜೂನ್ 2023

ಸುರತ್ಕಲ್: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಕಟ್ಟಡಕ್ಕೆ ಢಿಕ್ಕಿ: ಮೂವರು ಪ್ರಾಣಾಪಾಯದಿಂದ ಪಾರು!

ಸುರತ್ಕಲ್: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ಸುರತ್ಕಲ್ ಸಮೀಪದ ತಡಂಬೈಲು ಮಾರಿಗುಡಿ ಬಳಿ ರವಿವಾರ ಮುಂಜಾನೆ ನಡೆದಿರುವುದು ವರದಿಯಾಗಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರಿನಲ್ಲಿ ಓರ್ವ ಯುವಕ ಮತ್ತು ಇಬ್ಬರು ಯುವತಿಯರು ಉಡುಪಿ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದರೆನ್ನಲಾಗಿದೆ. ಇವರು ಸಂಚರಿಸುತ್ತಿದ್ದ ಕಾರು ಇಂದು ಮುಂಜಾನೆ 3:30ರ ಸುಮಾರಿಗೆ ತಡಂಬೈಲು ಮಾರಿಗುಡಿ ಬಳಿ ಅಪಘಾತಕ್ಕೀಡಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಮಾರಿಗುಡಿ ಬಳಿ ತಿರುವು ಇದ್ದು, ಈ ಬಗ್ಗೆ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಇಲ್ಲದಿರುವುದರಿಂದ ತಿರುವು ತಕ್ಷಣಕ್ಕೆ ಚಾಲಕನ ಅರಿವಿಗೆ ಬಂದಿಲ್ಲ ಎನ್ನಲಾಗಿದೆ. ಇದರಿಂದ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ವಿಭಜಕಕ್ಕೆ ಢಿಕ್ಕಿ ಹೊಡೆದು ಹೆದ್ದಾರಿಯ ಇನ್ನೊಂದು ಪಾರ್ಶ್ವವನ್ನು ದಾಟಿ ರಸ್ತೆ ಬದಿಯ ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆದಿದೆ.

ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಕ್ರಗಳು ಸ್ಫೋಟಗೊಂಡು ಛಿಧ್ರವಾಗಿವೆ. ಢಿಕ್ಕಿಯ ರಭಸಕ್ಕೆ ಕಟ್ಟಡಕ್ಕೂ ಹಾನಿಯಾಗಿದೆ.

ಅಪಘಾತದ ವೇಳೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.