ಡೈಲಿ ವಾರ್ತೆ: 30 ಜೂನ್ 2023
ಬಿ.ಸಿ.ರೋಡ್ – ಕೈಕಂಬದ ವಸತಿ ಕಟ್ಟಡದಿಂದ ಡಿಶ್ ಟೆಕ್ನಿಷಿಯನ್ ಓರ್ವ ಆಯತಪ್ಪಿ ಕೆಳಗೆ ಬಿದ್ದು ಮೃತ್ಯು
ಬಂಟ್ವಾಳ : ಬಿ.ಸಿ.ರೋಡ್ – ಕೈಕಂಬದ ವಸತಿ ನಿಲಯದ ಮೂರು ಮಹಡಿ ಕಟ್ಟಡದಲ್ಲಿ ದೂರದರ್ಶದ ಡಿಶ್ ರಿಪೇರಿ ಮಾಡುತ್ತಿದ್ಧ ವೇಳೆ ಟೆಕ್ನಿಷಿಯನ್ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಕೊಯಿಲ ಗ್ರಾಮದ ಗೋವಿಂದಬೆಟ್ಟು ನಿವಾಸಿ ಯತೀಶ್ ಗಾಣಿಗ (30) ಮೃತಪಟ್ಟವರು.
ಡಿಶ್ ರಿಪೇರಿ ಮಾಡುವ ವೇಳೆ ಆಯತಪ್ಪಿ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಘಟನೆ ನಡೆದ ತಕ್ಷಣ ಮಿಲಾದುನ್ನಭಿ ಸಂಘದ ನುಸ್ರತ್ ಅಂಬ್ಯುಲೆನ್ಸ್ ಮೂಲಕ ಕೇವಲ 16 ನಿಮಿಷಗಳಲ್ಲಿ ಚಾಲಕ, ಸಮಾಜ ಸೇವಕ, ಸಮಾದ್ ಕೈಕಂಬ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಆತ ಸಾವನ್ನಪ್ಪಿದ ಬಗ್ಗೆ ವೈದ್ಯರು ದೃಡಪಡಿಸಿದ್ದರು.
ಕಳೆದ 10 ವರ್ಷಗಳಿಂದ ಟಿ.ವಿ ರಿಪೇರಿ, ಡಿಶ್ ಅಳವಡಿಕೆ, ಎಸಿ ಮೆಕ್ಯಾನಿಕ್ ಆಗಿ ವೃತ್ತಿ ಮಾಡುತ್ತಿದ್ದ ಈತ ತಂದೆ,ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.