ಡೈಲಿ ವಾರ್ತೆ:25 ಆಗಸ್ಟ್ 2023
ಮೊಡಂಕಾಪು : ಕಾರ್ಮೆಲ್ ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ಇಂಗು ಗುಂಡಿ ನಿರ್ಮಾಣದ ಮೂಲಕ “ಜಲ ಸಾಕ್ಷರತೆಯ ಪಾಠ”.
ಬಂಟ್ವಾಳ : ಮೊಡಂಕಾಪು ಕಾರ್ಮೆಲ್ ಪ್ರೌಢಶಾಲಾ ವಿದ್ಯಾರ್ಥಿನಿಯರು ಒಟ್ಟು 470 ಇಂಗು ಗುಂಡಿ ನಿರ್ಮಿಸುವ ಮೂಲಕ “ಜಲ ಸಾಕ್ಷರತೆಯ ಪಾಠ” ಕ್ಕೆ ಒತ್ತು ನೀಡಿದೆ.
ನೀರಿಗಾಗಿ ನಾವು ಏನು ಮಾಡಿದ್ದೇವೆ ಎನ್ನುವುದು ಬಹಳ ಅಗತ್ಯ. ಆದರೆ ನೀರಿನ ರಕ್ಷಣೆಯ ಬಗ್ಗೆ ಹೆಜ್ಜೆ ಹಾಕಿದಾಗ ಮಾತ್ರ ನೀರುಳಿಸಲು ಸಾಧ್ಯ. ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ನಿಲ್ಲಿಸಿ, ನೀರನ್ನು ಇಂಗಿಸಿ, ಚಳಿಗಾಲ ಹಾಗೂ ಬೇಸಿಗೆಯಲ್ಲಿ ಉಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಶಾಲೆಯ ಹಸಿರು ಭವಿಷ್ಯ ಪರಿಸರ ಸಂಘದ ವತಿಯಿಂದ “ನೀರು ಇಂಗಿಸಿ, ಜೀವ ಜಲ ಉಳಿಸಿ., ಭವಿಷ್ಯ ರೂಪಿಸಿ ಎಂಬ ಧ್ಯೇಯದಡಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಇಂಗು ಗುಂಡಿ ನಿರ್ಮಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಇದರಂತೆ ವಿದ್ಯಾರ್ಥಿಗಳು ಹೆತ್ತವರ, ನೆರೆಹೊರೆಯವರ ಸಹಾಯ ಪಡೆದು ಮನೆಯ ಸುತ್ತಮುತ್ತ ಗುಡ್ಡ ಹಾಗೂ ಅರಣ್ಯ ಪ್ರದೇಶಗಳಲ್ಲಿ 3×2×2 ಅಳತೆಯ ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ.
ಈ ಸ್ಪರ್ಧೆ ವಿಜ್ಞಾನ ಪಾಠದ ಒಂದು ಕಾರ್ಯ ಯೋಜನೆಯಾಗಿ ವಿದ್ಯಾರ್ಥಿಗಳು ತೆಗೆದುಕೊಂಡಿ ರುತ್ತಾರೆ. ಹೀಗೆ ಪಾಠದ ಜೊತೆಗೆ ಮಳೆ ನೀರಿನ ಕೊಯ್ಲು ಹಾಗು ನೀರಿನ ಸಂರಕ್ಷಣೆಯ ಜೀವನ ಪಾಠವನ್ನು ತಿಳಿಯುವಲ್ಲಿ ವಿದ್ಯಾರ್ಥಿಗಳು ಯಶಸ್ವಿ ಯಾಗಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ ಅವರಪೋಷಕರಲ್ಲಿ, ನೆರೆ ಹೊರೆ ಯವರಲ್ಲಿ ನೀರು ಇಂಗಿಸುವ ಜಾಗೃತಿ ಉಂಟಾಗಿದೆ ಎಂದು ಮುಖ್ಯ ಶಿಕ್ಷಕಿ ಭಗಿನಿ ನವೀನ ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಶಾಲೆಯ 73 ವಿದ್ಯಾರ್ಥಿನಿಯರು 190 ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಈ ಜಲ ಜಾಗೃತಿಯಲ್ಲಿ ವಿದ್ಯಾರ್ಥಿ ನಿಯರು ಕಳೆದ ನಾಲ್ಕು ವರ್ಷಗಳಿಂದ ವಿಜ್ಞಾನ ಶಿಕ್ಷಕರಾದ ರೋಷನ್ ಪಿಂಟೊ ರವರ ಮಾರ್ಗದರ್ಶನದಲ್ಲಿ ತೊಡಗಿಸಿಕೊಂಡಿದ್ದು ಈ ತನಕ ಒಟ್ಟು 470 ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ .
ಅತ್ಯಧಿಕ ಗುಂಡಿಗಳನ್ನು ನಿರ್ಮಿಸಿದ ವಿದ್ಯಾರ್ಥಿಗಳಾದ ರಿಯೋನ ಪಿಂಟೊ , ಸ್ವಾತಿ, ಮಿಶಲ್ ಲೋಬೊ, ಪರಿಣಿತ, ಸಿಂಚನ, ರಶ್ವಿತ ,ಸಂಜನಾ ಹಾಗೂ ಇಂಗು ಗುಂಡಿ ನಿರ್ಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.