



ಡೈಲಿ ವಾರ್ತೆ: 27/ಆಗಸ್ಟ್/ 2025


ಸುಜ್ಞಾನ ಪಿಯು ಕಾಲೇಜಿನಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ!
ವಿದ್ಯಾರ್ಥಿಗಳು ಕಲೆಯನ್ನು ಅಸ್ವಾಧಿಸುವ ಗುಣವನ್ನು ಬೆಳೆಸಿಕೊಳ್ಳಲಿ; ಡಾ.ರಮೇಶ್ ಶೆಟ್ಟಿ

ಕುಂದಾಪುರ: ಆಗಷ್ಟೇ ಜಡಿ ಮಳೆ ಸುರಿದು ಧರೆಯಲ್ಲಾ ತಂಪಾದ ಗಳಿಗೆ! ಒಂದು ಕಡೆ ಮಕ್ಕಳೆಲ್ಲಾ ಹೊಸ ಬಟ್ಟೆ ತೊಟ್ಟುಕೊಂಡು ಖುಷಿಯಿಂದ ಓಡಾಡುತ್ತಿದ್ದರೆ, ಇನ್ನೊಂದು ಕಡೆ ಘಂ ಎನ್ನುವ ಹಬ್ಬದೂಟದ ಪರಿಮಳ. ಪೂಜೆ ಪುನಸ್ಕಾರಗಳು ಮತ್ತೊಂದು ಕಡೆ…ಅರೇ ಏನಿದು ಸಂಭ್ರಮ, ಸಡಗರವೆಂದು ಎಲ್ಲರೊಳಗೊಂದು ಕುತೂಹಲ! ಇದು ಯಡಾಡಿ-ಮತ್ಯಾಡಿಯ ಸುಂದರವಾದ ಪರಿಸರದಲ್ಲಿರುವ ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆ ಹಾಗೂ ಸುಜ್ಞಾನ ಪಿಯು ಕಾಲೇಜಿನಲ್ಲಿ ಕಂಡು ಬಂದ ಗೌರಿ-ಗಣೇಶ ಹಬ್ಬದ ಸಂಭ್ರಮ!
ಹೌದು, ಹಬ್ಬವೆಂದರೆ ಮನೆ ಮನದಲ್ಲಿ ಸಂಭ್ರಮ, ಸಡಗರ ಮನೆ ಮಾಡುತ್ತದೆ. ಹಬ್ಬಕ್ಕಿರುವ ಶಕ್ತಿಯೇ ಅಂಥದ್ದು! ಈ ಹಬ್ಬಗಳ ನೆಪದಲ್ಲಿ ಮನೆಮಂದಿಯೆಲ್ಲಾ ಒಟ್ಟು ಸೇರಿ ಸಿಹಿಯುಂಡು ಖುಷಿ ಪಡುತ್ತಾರೆ.ಆದರೆ ಕಣ್ತುಂಬ ಭವಿಷ್ಯದ ಕನಸು ಕಟ್ಟಿಕೊಂಡು ಮನೆ ಮಂದಿಯೆಲ್ಲಾ ಬಿಟ್ಟು ಹಾಸ್ಟೆಲ್ನಲ್ಲಿರುವ ಓದುತ್ತಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಈ ಹಬ್ಬದ ಖುಷಿಯಿಂದ ವಂಚಿತರಾಗುತ್ತಾರೆ. ಹಾಸ್ಟೆಲ್ನಲ್ಲಿರುವ ಮಕ್ಕಳಿಗೆ ಹಬ್ಬದ ಪ್ರಾಮುಖ್ಯತೆ, ಅದರ ಆಚರಣೆಗಳ ಬಗ್ಗೆ ತಿಳಿದಿರುವುದಿಲ್ಲ ಎಂಬ ತಪ್ಪು ಕಲ್ಪನೆ ಸಾಕಷ್ಟು ಜನರಲ್ಲಿದೆ. ಆದರೆ ಸುಜ್ಞಾನ ಎಜುಕೇಶನಲ್ ಟ್ರಸ್ಟ್ನಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತಿಯೊಂದು ಹಬ್ಬವನ್ನು ಆಚರಿಸುವುದರ ಜೊತೆಗೆ ಅದರ ವಿಶೇಷತೆಗಳ ಕುರಿತು ಅರಿವು ಮೂಡಿಸುತ್ತದೆ.ಮನೆಯವರು ತಮ್ಮೊಂದಿಗೆ ಇಲ್ಲ ಎನ್ನುವ ಕೊರಗನ್ನು ನಿವಾರಿಸುತ್ತದೆ.
ಇನ್ನು ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಮಾತನಾಡುತ್ತಾ, ಹಬ್ಬ ಹರಿದಿನಗಳು ಬಂದಾಗ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಮನೆಯವರ ನೆನಪಾಗುತ್ತದೆ. ಆದರೆ ನಮ್ಮ ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಮನೆಯವರ ನೆನಪಿನಲ್ಲಿ ತಮ್ಮ ಮುಗ್ಧ ಮನಸ್ಸನ್ನು ಮುದುಡಿಸಿಕೊಳ್ಳಬಾರದು ಎಂಬ ಕಾರಣಕ್ಕೆ ತಾವು ಪ್ರತಿಯೊಂದು ಹಬ್ಬವನ್ನು ನಮ್ಮ ಸಂಸ್ಥೆಯಲ್ಲಿ ಆಚರಿಸುತ್ತೇವೆ.ಇಲ್ಲಿರುವ ಮಕ್ಕಳಿಗೆ ತಾಯಿಯಷ್ಟು ಪ್ರೀತಿ ಕೊಡುವುದಕ್ಕೆ ನಮ್ಮಿಂದ ಸಾಧ್ಯವಾಗದೇ ಇರಬಹುದು ಆದರೆ ತಂದೆ ಮಾಡುವ ಜವಾಬ್ದಾರಿಯನ್ನು ನಾವು ಮಾಡುತ್ತೇವೆ. ಅವರ ಭವಿಷ್ಯ ಕಟ್ಟುವ ಜವಾಬ್ದಾರಿಯ ಜೊತೆಗೆ ಅವರಿಗೆ ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಹೊಣೆ ನಮ್ಮದು.ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಕಲೆಯ ಬಗ್ಗೆ ಒಲವು ಮೂಡುತ್ತದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಇನ್ನು ವಿದ್ಯಾರ್ಥಿಗಳು ಕಲೆಯನ್ನು ಅಸ್ವಾಧಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಎಲ್ಲರೂ ಕಲಾವಿದರಾಗುವುದಕ್ಕೆ ಸಾಧ್ಯವಾಗದೇ ಇರಬಹುದು ಆದರೆ ಕಲೆಯನ್ನು ಗೌರವಿಸುವ, ಪ್ರೀತಿಸುವ ಹಾಗೂ ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದು ಕಲಾವಿದರನ್ನು ಬೆಳೆಸುವುದಕ್ಕೆ ಸಹಾಯಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದ್ದಾರೆ.
ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡುತ್ತಾ, ಹಬ್ಬ ಬಂದಾಕ್ಷಣ ವಿದ್ಯಾರ್ಥಿಗಳಿಗೆ ಮನೆಯವರ ನೆನಪಾಗುವುದು ಸಹಜ! ಆದರೆ ನಮ್ಮ ಸಂಸ್ಥೆಯಲ್ಲಿ ವಿದ್ಯೆಯ ಜೊತೆಗೆ ಹಬ್ಬ ಹರಿದಿನಗಳ ಬಗ್ಗೆ ಅರಿವು ಮೂಡಿಸುತ್ತದೆ.ಪ್ರತಿಯೊಂದು ಹಬ್ಬವನ್ನೂ ಅದರ ಪದ್ಧತಿಯ ಅನುಗುಣವಾಗಿ ಆಚರಿಸುತ್ತೇವೆ. ಹಬ್ಬದೂಟವನ್ನು ಮನೆಮಂದಿಯ ಜೊತೆ ಕುಳಿತು ಸವಿಯುವುದಕ್ಕೆ ಆಗುತ್ತಿಲ್ಲ ಎಂಬ ವಿದ್ಯಾರ್ಥಿಗಳ ಮನಸ್ಸಿನ ಕೊರಗನ್ನು ನಿವಾರಿಸುವುದಕ್ಕೆ ನಾವು ಅವರ ಜೊತೆ ಕುಳಿತು ಒಟ್ಟಾಗಿ ಸಹಭೋಜನ ಮಾಡುತ್ತೇವೆ.ವಿದ್ಯಾರ್ಥಿಗಳು ಕೂಡ ತಮ್ಮ ಚಿತ್ತವನ್ನು ಓದಿನ ಕಡೆಗೆ ಹರಿಸಿ ಪೋಷಕರು ತಮಗಾಗಿ ಮಾಡಿದ ತ್ಯಾಗದ ಕುರಿತು ಅರಿವು ಹೊಂದಿರಬೇಕು.ಓದಿನ ವಿಷಯದಲ್ಲಿ ಯಾವುದೇ ನಿರಾಸಕ್ತಿ ತೋರದೇ ಸುಭದ್ರವಾದ ಭವಿಷ್ಯ ಕಟ್ಟಿಕೊಂಡು ಕಲಿತ ಸಂಸ್ಥೆಗೆ ಹಾಗೂ ತಂದೆ-ತಾಯಿಗೆ, ಈ ದೇಶಕ್ಕೆ ಹೆಮ್ಮೆ ತರುವಂಥ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಮನೋರಂಜನಾ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿದ್ದರು.ನೆರೆದಿದ್ದ ವಿದ್ಯಾರ್ಥಿಗಳು ಹಬ್ಬದ ಆಚರಣೆಯ ಜೊತೆಗೆ ಬಾಯ್ತುಂಬ ಹಬ್ಬದೂಟದ ಸವಿಯುಂಡು ಕಣ್ತುಂಬ ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗನ್ನು ತುಂಬಿಕೊಂಡರು.
ವೇದಿಕೆಯಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರಾದ ರಂಜನ್ ಬಿ.ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ. ಉಪಸ್ಥಿತರಿದ್ದರು. ಶಿಕ್ಷಕಿ ಸುದಕ್ಷಿಣ ಕಾರ್ಯಕ್ರಮವನ್ನು ನಿರೂಪಿಸಿದರು.