ಡೈಲಿ ವಾರ್ತೆ: 03/NOV/2023
ದೀಪಾವಳಿಗೆ ರಾಜ್ಯಾದ್ಯಂತ ರಾತ್ರಿ 8 ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಪರಿಸರ ಮತ್ತು ಶಬ್ದಮಾಲಿನ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.
ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ನ.11 ರಿಂದ 15 ರ ವರೆಗೆ ಆಚರಿಸಲಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನು ಯಥಾಸ್ಥಿತಿ ಪಾಲನೆ ಮಾಡಲು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.
ನಿಯಮಗಳೇನು?
ಪಟಾಕಿಯನ್ನು ರಾತ್ರಿ 8 ರಿಂದ 10 ಗಂಟೆ ವರೆಗೆ ಮಾತ್ರ ಹೊಡೆಯಲು ಅವಕಾಶ ಇರಲಿದೆ. ಅಧಿಕಾರಿಗಳು ಪರಿಶೀಲನೆ ವೇಳೆ ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಮಾರುತ್ತಿದ್ದರೆ ಇಡೀ ಗೋದಾಮು ವಶಕ್ಕೆ ಪಡೆಯಬೇಕು. ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
ಹಸಿರು ಪಟಾಕಿ ಕ್ಯೂಆರ್ ಕೋಡ್ ಚಿಹ್ನೆ ಇಲ್ಲದ ಪಟಾಕಿಗಳನ್ನು ವಶಕ್ಕೆ ಪಡೆಯಬೇಕು. ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಇವುಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು.
ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ನಿಷೇಧಿತ ಸ್ಥಳಗಳಲ್ಲಿ ಪಟಾಕಿ ಹೊಡೆಯುವಂತಿಲ್ಲ. ಇದನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಗಳು ಕಡ್ಡಾಯವಾಗಿ ಪಾಲಿಸಬೇಕು.
ನವೆಂಬರ್ 5 ರಿಂದ 20 ರ ವರೆಗೆ ನಿರಂತರ ವಾಯುಮಾಲಿನ್ಯ ಪರೀಕ್ಷೆ ಮಾಡಬೇಕು. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಮಾಪನದ ಮೂಲಕ ಪರೀಕ್ಷೆ ಮಾಡಬೇಕು. ಹೊರ ರಾಜ್ಯದ ಅನಧಿಕೃತ ಪಟಾಕಿಗಳಿಗೆ ನಿಷೇಧ ವಿಧಿಸಲಾಗಿದೆ. ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪೊಲೀಸರ ಮೂಲಕ ನಿಯಮ ಪಾಲನೆಯ ಬಗ್ಗೆ ಕ್ರಮ ವಹಿಸಬೇಕು ಎಂದು ಮಂಡಳಿ ತಿಳಿಸಿದೆ.