

ಡೈಲಿವಾರ್ತೆ:13/ಮಾರ್ಚ್/2026


ಅನಾರೋಗ್ಯದಿಂದ ಬೇಸತ್ತು ಚಕ್ರಾ ನದಿಗೆ ಹಾರಿ ಆತ್ಮಹತ್ಯೆ: ಹುಬ್ಬಳ್ಳಿ ಮೂಲದ ವ್ಯಕ್ತಿಯ ಶವ ಕುಂದಾಪುರದಲ್ಲಿ ಪತ್ತೆ

ಕುಂದಾಪುರ: ದೀರ್ಘಕಾಲದ ಅನಾರೋಗ್ಯದಿಂದ ಬೇಸತ್ತ ವ್ಯಕ್ತಿಯೊಬ್ಬರು ಚಕ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಬಗ್ವಾಡಿ ಬ್ರಿಡ್ಜ್ ಬಳಿ ಬೆಳಕಿಗೆ ಬಂದಿದೆ.
ಮೃತರನ್ನು ಹುಬ್ಬಳ್ಳಿ ನಗರದ ಆರ್.ಎಂ. ಲೋಹಿಯಾ ನಗರ, ಗೋಕುಲ್ ರೋಡ್ ನಿವಾಸಿ ಭಾಸ್ಕರ ಪೂಜಾರಿ (65) ಎಂದು ಗುರುತಿಸಲಾಗಿದೆ.
ಇವರು ಪತ್ನಿ ಹಾಗೂ ಮಕ್ಕಳೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಾಗಿದ್ದರು.
ಮೃತರ ತಮ್ಮ ಗೋವಿಂದ ಪೂಜಾರಿ ನೀಡಿದ ದೂರಿನ ಪ್ರಕಾರ, ಭಾಸ್ಕರ ಪೂಜಾರಿಯವರು ಮಾರ್ಚ್ 11ರಂದು ಬೆಳಿಗ್ಗೆ ಸುಮಾರು 6 ಗಂಟೆ ಸುಮಾರಿಗೆ ಶುಗರ್ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಬಳಿಕ ಮನೆಗೆ ಮರಳಿರಲಿಲ್ಲ.
ಈ ಬಗ್ಗೆ ಅವರ ಪುತ್ರಿ ಸುವರ್ಣ ಅವರು ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಪೊಲೀಸರಿಗೆ ದೂರು ನೀಡುವಂತೆ ಸೂಚಿಸಲಾಗಿತ್ತು.
ಇದೇ ವೇಳೆ ಮಾರ್ಚ್ 12ರಂದು ಮಧ್ಯಾಹ್ನ ದೇವಲ್ಕುಂದ ಗ್ರಾಮದ ಬಗ್ವಾಡಿ ಬ್ರಿಡ್ಜ್ ಕೆಳಭಾಗದ ಚಕ್ರಾ ನದಿಯಲ್ಲಿ ಮೃತದೇಹ ತೇಲುತ್ತಿರುವುದಾಗಿ ರವೀಂದ್ರ ಮೊಗವೀರ ಎಂಬವರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತದೇಹವು ಭಾಸ್ಕರ ಪೂಜಾರಿಯವರದ್ದೇ ಎಂಬುದು ದೃಢಪಟ್ಟಿದೆ. ಬ್ರಿಡ್ಜ್ ಮೇಲ್ಭಾಗದಲ್ಲಿ ಅವರ ಚಪ್ಪಲಿಗಳು ಪತ್ತೆಯಾಗಿದ್ದು, ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಭಾಸ್ಕರ ಪೂಜಾರಿಯವರಿಗೆ ಬಿಪಿ, ಶುಗರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿದ್ದು, ಇದಕ್ಕಾಗಿ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದಿಂದ ಬೇಸತ್ತು ಅವರು ಈ ಕೃತ್ಯ ಎಸಗಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಕ್ರಮಾಂಕ 09/2026 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.