ಡೈಲಿವಾರ್ತೆ:13/ಮಾರ್ಚ್/2026

​ನಾಗರಮಠದಲ್ಲಿ ಮರಳು ದಂಧೆ ವಿರುದ್ಧ ಜನಾಕ್ರೋಶ: ಜಿಲ್ಲಾಧಿಕಾರಿ ಭೇಟಿಗೆ ಪಟ್ಟು ಹಿಡಿದು ರಸ್ತೆ ತಡೆ

​ಬ್ರಹ್ಮಾವರ: ತಾಲ್ಲೂಕಿನ ಹೊಸಹಾಳ ಗ್ರಾಮದ ನಾಗರಮಠ ಅಣೆಕಟ್ಟು ಪರಿಸರದಲ್ಲಿ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆ ವತಿಯಿಂದ ನಡೆಯುತ್ತಿರುವ ಅವೈಜ್ಞಾನಿಕ ಮರಳುಗಾರಿಕೆಯನ್ನು ವಿರೋಧಿಸಿ ಶುಕ್ರವಾರ ಬೆಳಿಗ್ಗೆ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿದ ನೂರಾರು ಗ್ರಾಮಸ್ಥರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆಯಿತು.

​ಸರ್ಕಾರದ ಆದೇಶಕ್ಕೆ ಗ್ರಾಮಸ್ಥರ ಅಕ್ಷೇಪ:

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಮುಖಂಡರಾದ ಚಂದ್ರ ಕಾಂಚನ್, “2021 ರಿಂದಲೂ ನಾವು ಈ ಭಾಗದಲ್ಲಿ ಮರಳುಗಾರಿಕೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ಮಾಹಿತಿ ನೀಡುತ್ತಲೇ ಬಂದಿದ್ದೇವೆ. ಆದರೂ 2025ರ ಡಿಸೆಂಬರ್‌ನಲ್ಲಿ ನಿಯಮಬಾಹಿರವಾಗಿ ಮರಳುಗಾರಿಕೆಗೆ ಮರು ಪರವಾನಗಿ ನೀಡಲಾಗಿದೆ. ಸುಮಾರು 1,13,000 ಮೆಟ್ರಿಕ್ ಟನ್ ಮರಳು ತೆಗೆಯಲು ಅನುಮತಿ ನೀಡಿರುವುದು ಈ ಭಾಗದ ಪರಿಸರಕ್ಕೆ ಮಾರಕವಾಗಲಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

​ಕೃಷಿ ಭೂಮಿ ನಾಶ ಮತ್ತು ಅಂತರ್ಜಲದ ಭೀತಿ:

ಮರಳುಗಾರಿಕೆಯಿಂದಾಗಿ ನದಿ ತೀರದ ಕೃಷಿ ಭೂಮಿಗಳು ಕೊಚ್ಚಿ ಹೋಗುತ್ತಿದ್ದು, ಹೊಳೆ ಸೇರುತ್ತಿವೆ. ಜಲಜೀವನ್ ಮಿಷನ್ ಅಡಿಯ ಕುಡಿಯುವ ನೀರಿನ ಬಾವಿಗಳು ಬತ್ತಿ ಹೋಗುವ ಆತಂಕ ಎದುರಾಗಿದೆ. “ಒಂದು ಮೀಟರ್‌ಗಿಂತ ಹೆಚ್ಚು ಆಳಕ್ಕೆ ಮರಳು ತೆಗೆಯಬಾರದು ಎಂಬ ನಿಯಮವಿದ್ದರೂ, ಇಲ್ಲಿ 2-3 ಮೀಟರ್ ಆಳಕ್ಕೆ ಮರಳು ತೆಗೆಯಲಾಗುತ್ತಿದೆ. ಸೀನಿಯರ್ ಜಿಯಾಲಜಿಸ್ಟ್‌ಗಳು ಈ ಬಗ್ಗೆ ಮೌನ ವಹಿಸಿರುವುದು ದಂದೆಕೋರರಿಗೆ ಜಿಲ್ಲಾಡಳಿತದ ಬೆಂಬಲವಿದೆ ಎಂಬ ಅನುಮಾನ ಮೂಡಿಸುತ್ತಿದೆ,” ಎಂದು ಪ್ರತಿಭಟನಾಕಾರರು ದೂರಿದ್ದಾರೆ.

​ಅಕ್ರಮಗಳ ಸರಮಾಲೆ ಮತ್ತು ಸಾರ್ವಜನಿಕ ಸುರಕ್ಷತೆ:

ಟ್ರಿಪ್ ಶೀಟ್ ಉಲ್ಲಂಘನೆ: 46 ಮರಳು ತುಂಬಿದ ಲಾರಿಗಳಿದ್ದರೂ ಕೇವಲ 4 ಟ್ರಿಪ್ ಶೀಟ್ ಬಳಸಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
​ಕಿರಿದಾದ ರಸ್ತೆಗಳಲ್ಲಿ ಮರಳು ಸಾಗಾಟದ ಲಾರಿಗಳ ಹಾವಳಿಯಿಂದ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಜೀವಭಯ ಉಂಟಾಗಿದೆ. ಈ ಹಿಂದೆ ಇಲ್ಲಿ ನಡೆದ ಅಪಘಾತಗಳಲ್ಲಿ ಹಲವರು ಪ್ರಾಣ ಕಳೆದುಕೊಂಡರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡಿಲ್ಲ.
​ಪೊಲೀಸ್ ದೌರ್ಜನ್ಯ: ನ್ಯಾಯ ಕೇಳಲು ಹೋದ ಗ್ರಾಮಸ್ಥರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಎಫ್‌ಐಆರ್ ಮೂಲಕ ಹೆದರಿಸುವ ತಂತ್ರವನ್ನು ಪೊಲೀಸರು ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

​ಮಹಿಳೆಯರ ಕಳವಳ:

ಸ್ಥಳೀಯ ಮಹಿಳೆ ಆಶಾ ಮಾತನಾಡಿ, “ತೋಟದ ಪಕ್ಕದಲ್ಲೇ ಮರಳುಗಾರಿಕೆ ನಡೆಯುತ್ತಿರುವುದರಿಂದ ಅಪರಿಚಿತರು ತೋಟಕ್ಕೆ ನುಗ್ಗಿ ಕೃಷಿ ಉತ್ಪನ್ನಗಳನ್ನು ಕಳವು ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ತಡೆಗೋಡೆ ನಿರ್ಮಿಸುವ ಭರವಸೆ ನೀಡಬೇಕು. ಕೃಷಿ ಭೂಮಿ ನಾಶವಾದರೆ ನಾವು ಮರಳು ತಿಂದು ಬದುಕಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

​ಇನ್ನೋರ್ವ ಸ್ಥಳೀಯರಾದ ಗಣೇಶ್, “ಗ್ರಾಮದ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಹರಿಸದ ಸರ್ಕಾರ, ಕೇವಲ ದಂದೆಕೋರರ ರಕ್ಷಣೆಗೆ ನಿಂತಿದೆ. ಊರಿನ ಸಮಸ್ಯೆ ಬಗೆಹರಿಯುವವರೆಗೂ ನಮ್ಮ ಹೋರಾಟ ನಿಲ್ಲದು,” ಎಂದರು.

​ನಿರ್ಣಾಯಕ ಎಚ್ಚರಿಕೆ:
​1999ರಲ್ಲೇ ಅಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಈ ಭಾಗದಲ್ಲಿ ಮರಳುಗಾರಿಕೆಗೆ ನಿಷೇಧ ಹೇರಿದ್ದರು. ಆದರೆ ಈಗಿನ ಅಧಿಕಾರಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. “ಜಿಲ್ಲಾಧಿಕಾರಿಗಳು ಮತ್ತು ಎಸ್‌.ಪಿ ಅವರು ಸ್ಥಳಕ್ಕೆ ಬಂದು ನಮಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ರಸ್ತೆಯಲ್ಲೇ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧ,” ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಸ್ಥಳಕ್ಕೆ ಗಣಿ ಇಲಾಖೆ ಅಧಿಕಾರಿಗಳ ಭೇಟಿ:ಪ್ರತಿಭಟನೆ ವಾಪಸ್

​ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯಾದ ಹಾಜಿರಾ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿಗಳು ಮರಳುಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವಾಂಶಗಳನ್ನು ಪರಿಶೀಲಿಸುವವರೆಗೆ ಮರಳುಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಅವರು ಸ್ಥಳದಲ್ಲೇ ಸೂಚನೆ ನೀಡಿದರು. ಅಧಿಕಾರಿಯ ಈ ಭರವಸೆಯ ನಂತರ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಕೈಬಿಟ್ಟರು.

​ಈ ಸಂದರ್ಭದಲ್ಲಿ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್. ಹಾಗೂ ಬ್ರಹ್ಮಾವರ ಠಾಣಾಧಿಕಾರಿ ಅಶೋಕ್ ಮಳಬಗಿ ಅವರು ಸ್ಥಳದಲ್ಲಿ ಹಾಜರಿದ್ದು, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.