ಡೈಲಿ ವಾರ್ತೆ: 03/NOV/2023
ವರದಿ: ವಿದ್ಯಾಧರ ಮೊರಬಾ
ಶ್ವೇತಾ ಹರಿಕಂತ್ರ MBA ಪರೀಕ್ಷೆಯಲ್ಲಿ ಧಾರವಾಡ ವಿವಿಗೆ ಪ್ರಥಮ
ಅಂಕೋಲಾ : ಕುಮಟಾ ತಾಲೂಕಿನ ಕಿಮಾನಿ ಗ್ರಾಮದ ಶ್ವೇತಾ ಉಮೇಶ ಹರಿಕಂತ್ರ ಇವರು ಹುಬ್ಬಳ್ಳಿಯ ಐಬಿಎಮ್ ಆರ್.ಕಾಲೇಜಿನ ಎಂಬಿಎ ಪರೀಕ್ಷೆಯಲ್ಲಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ಐದು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾಳೆ.
ಕಾಲೇಜಿನ ಎಂಬಿಎ ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಡೆದ 73ನೇ ವಾರ್ಷಿಕ ಘಟಿಕೋತ್ಸವದ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಇವರಿಂದ ಐದು ಚಿನ್ನದ ಪದಕ ಪಡೆಯುವ ಮೂಲಕ ಕಾಲೇಜಿಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ.
ಶ್ವೇತಾ ಹರಿಕಂತ್ರ ಪ್ರಾಥಮಿಕ ಶಿಕ್ಷಣವನ್ನು ಕಿಮಾನಿ, ಬರ್ಗಿ ಮತ್ತು ಪ್ರೌಢ ಶಿಕ್ಷಣವನ್ನು ಸರ್ಕಾರಿ ಪ್ರೌಢ ಶಾಲೆ ಬರ್ಗಿ, ಕುಮಟಾ ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ಬಿಬಿಎ ಮುಗಿಸಿ, ಹುಬ್ಬಳ್ಳಿಯ ಐ.ಬಿ.ಎಂ.ಆರ್ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡಿದ್ದಳು. ಇವಳು ಕುಮಟಾ ತಾಲೂಕಿನ ಬರ್ಗಿ ಗ್ರಾಪಂ.ವ್ಯಾಪ್ತಿಯ ಕಿಮಾನಿ ನಿವಾಸಿ ಉಮೇಶ ಮತ್ತು ಸೀತಾ ಹರಿಕಂತ್ರ ದಂಪತಿಗಳ ಪುತ್ರಿ. ಇಳವ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು, ಪ್ರಾಧ್ಯಾಪಕ ವೃಂದದವರು ಮತ್ತು ಸ್ಥಳೀಯರ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.