ಡೈಲಿ ವಾರ್ತೆ: 04/NOV/2023
ಇನ್ಸ್ಟಾಗ್ರಾಮ್ ನಲ್ಲಿ ಪರಿಚಯ: ಕಾಸರಗೋಡಿನ ಯುವಕನಿಂದ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ – ಆರೋಪಿಯ ಬಂಧನ
ಬಂಟ್ವಾಳ: ಇನ್ಸ್ಟಾಗ್ರಾಮ್ ನಲ್ಲಿ ಫೇಕ್ ಐಡಿ ಸೃಷ್ಟಿಸಿ ಅಪ್ರಾಪ್ತ ಬಾಲಕಿಯರಿಬ್ಬರ ಜೊತೆಗೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕಾಸರಗೋಡು ಮೂಲದ ಯುವಕನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಠಾಣೆ ವ್ಯಾಪ್ತಿಯಲ್ಲಿ ಪರಸ್ಪರ ಸಂಬಂಧಿಕರಾಗಿರುವ 16 ವರ್ಷ ಮತ್ತು 17 ವರ್ಷದ ಇಬ್ಬರು ಮುಸ್ಲಿಂ ಯುವತಿಯರಿಗೆ ಹುಡುಗಿ ಹೆಸರಲ್ಲೇ ಇನ್ಸ್ಟಾಗ್ರಾಮ್ ನಲ್ಲಿ ಯುವಕನೊಬ್ಬ ಕನೆಕ್ಟ್ ಆಗಿದ್ದ. ಹುಡುಗಿ ಹೆಸರಲ್ಲಿ ಆರಂಭದಲ್ಲಿ ಸಂಪರ್ಕ ಬೆಳೆಸಿ, ಬಳಿಕ ತನ್ನ ಹೆಸರನ್ನು ಅಡ್ಡೂರಿನ ತೌಫಿಲ್ ಎಂದು ಪರಿಚಯ ಮಾಡಿಕೊಂಡಿದ್ದ. ಆನಂತರ 16 ವರ್ಷದ ಯುವತಿ ಜೊತೆಗೆ ಆತ್ಮೀಯತೆ ಬೆಳೆಸಿ ರಾತ್ರಿ ವೇಳೆ ಮನೆಯ ಪರಿಸರಕ್ಕೆ ಬಂದು ದೈಹಿಕ ಸಂಪರ್ಕ ಬೆಳೆಸಿದ್ದ.
ಇದೇ ವೇಳೆ, ಅದೇ ಪರಿಸರದ ಇನ್ನೊಬ್ಬ ಯುವತಿಗೂ ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದು ಬಳಿಕ ತಾನು ಕಾಸರಗೋಡಿನ ರಫೀಕ್ ಎಂದು ಪರಿಚಯ ಮಾಡಿಕೊಂಡಿದ್ದ. ಕಳೆದ ಐದಾರು ತಿಂಗಳಲ್ಲಿ ಇಬ್ಬರು ಅಪ್ರಾಪ್ತ ಯುವತಿಯರ ಜೊತೆಗೂ ಈತನ ಕಾಮದಾಟ ನಡೆದಿತ್ತು. ಈ ಪೈಕಿ ಒಬ್ಬಾಕೆ ಗರ್ಭಿಣಿಯಾಗಿದ್ದರಿಂದ ಮನೆಯವರಿಗೆ ವಿಷಯ ತಿಳಿದು ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಇಬ್ಬರು ಯುವತಿಯರೂ ಸಾಮಾನ್ಯ ಬಡ ಕುಟುಂಬದವರಾಗಿದ್ದರು. ಆದರೆ ಆರೋಪಿಯು ತನ್ನ ನಿಜ ಹೆಸರನ್ನಾಗಲೀ, ತನ್ನ ಮೊಬೈಲ್ ನಂಬರನ್ನಾಗಲೀ ಯುವತಿಯರಿಗೆ ನೀಡಿರಲಿಲ್ಲ. ಇನ್ಸ್ಟಾಗ್ರಾಮ್ ನಲ್ಲೇ ಮೆಸೇಜ್, ಕರೆ ಮಾಡುತ್ತಿದ್ದ ಯುವಕನ ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟವಾಗಿತ್ತು. ಬಳಿಕ ಪೊಲೀಸರ ಸೂಚನೆಯಂತೆ, ಒಬ್ಬಾಕೆಯ ಮನೆಯವರ ಮೂಲಕವೇ ಟ್ರಾಪ್ ಮಾಡಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲವೆಂದು ಹೇಳಿ, ಬರಲು ತಿಳಿಸಿದ್ದು ಅದರಂತೆ ರಾತ್ರಿ ವೇಳೆ ಮನೆಗೆ ಬಂದಿದ್ದ ಯುವಕನನ್ನು ಪೊಲೀಸರೇ ಸೇರಿ ಅರೆಸ್ಟ್ ಮಾಡಿದ್ದಾರೆ.
ಆರೋಪಿ ಯುವಕ ಕಾಸರಗೋಡು ಮೂಲದ ಆಗರ್ಭ ಶ್ರೀಮಂತ ಕುಟುಂಬದ 23 ವರ್ಷದ ಅಹಮದ್ ರಫೀಕ್ ಎಂಬಾತ ಈ ರೀತಿ ವಂಚನೆ ಎಸಗಿದವನಾಗಿದ್ದು ಆರೋಪಿ ಇನ್ಸ್ಟಾಗ್ರಾಮ್ ನಲ್ಲಿ ಮೂರು ಫೇಕ್ ಐಡಿ ಸೃಷ್ಟಿಸಿರುವುದು ತನಿಖೆಯಲ್ಲಿ ಬಯಲಾಗಿದೆ.
ತಡರಾತ್ರಿಯಲ್ಲಿ ಬರುತ್ತಿದ್ದ ಆರೋಪಿ, ಯುವತಿಯರ ಜೊತೆಗೆ ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಬಗ್ಗೆ ದೂರು ದಾಖಲಾಗಿದೆ.
ಪ್ರತ್ಯೇಕ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಪ್ರಾಪ್ತ ಯುವತಿಯರಿಗೆ ದೌರ್ಜನ್ಯ ಎಸಗಿದ್ದರಿಂದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ, ಚೈಲ್ಡ್ ಕೇರ್ ಸಂಸ್ಥೆಯವರು ತನಿಖೆ ನಡೆಸುತ್ತಿದ್ದಾರೆ.