ಡೈಲಿ ವಾರ್ತೆ: 04/NOV/2023
ಬ್ರಹ್ಮಾವರ: ಮೊಗೆಬೆಟ್ಟು ಯಕ್ಷರಜತ ಸಂಭ್ರಮ ಕಾರ್ಯಕ್ರಮ
ಕೋಟ: ಯಕ್ಷಗುರು ಮೊಗೆಬೆಟ್ಟು ಪ್ರಸಾದ್ ಕುಮಾರ್ ಅಭಿಮಾನಿ ಬಳಗ ಮತ್ತು ಶಿಷ್ಯವೃಂದ, ಗೀತಾನಂದ ಫೌಂಡೇಶನ್ ಮಣೂರು, ಮಯ್ಯ ಯಕ್ಷಶ್ರೀ ಪ್ರತಿಷ್ಠಾನ ಅಣಲಾಡಿ ಮಠ ಆಶ್ರಯದಲ್ಲಿ ಯಕ್ಷಗಾನ ಗುರು, ಪ್ರಸಂಗಕರ್ತ ಮೊಗೆಬೆಟ್ಟು ಪ್ರಸಾದ್ ಕುಮಾರ್ ಅವರ ಯಕ್ಷಜೀವನದ ಬೆಳ್ಳಿಹಬ್ಬ ಸಂಭ್ರಮ, ಗುರುವಂದನೆ, ನ. 4ರಂದು ಬ್ರಹ್ಮಾವರ ಶ್ಯಾಮಿಲಿ ಶನಾಯ ಸಭಾಂಗಣದಲ್ಲಿ ಜರಗಿತು.
ನಾಡೋಜ ಡಾ. ಜಿ.ಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲೆಗೆ ಮೊಗೆಬೆಟ್ಟು ಅವರ ಕೊಡುಗೆ ಅನನ್ಯವಾದದ್ದು, ಅವರ ಯಕ್ಷಪಯಣಕ್ಕೆ ನಾವೆಲ್ಲರೂ ಸಹಕರಿಸಬೇಕು ಎಂದರು.
ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ.ಶ್ಯಾಮ್ ಭಟ್ ರಜತ ಗೌರವ ಪ್ರದಾನಿಸಿ ಮಾತನಾಡಿ, ಪ್ರಸಾದ್ ಮೊಗೆಬೆಟ್ಟು ಯಕ್ಷರಂಗದ ಅದ್ಬುತ ಪ್ರತಿಭೆ. ಓರ್ವ ಗುರುವಾಗಿ, ಸಾಹಿತಿಯಾಗಿ, ಪ್ರಸಂಗಕರ್ತರಾಗಿ, ಕಲಾವಿದರಾಗಿ ಅವರ ಕೊಡುಗೆ ದೊಡ್ಡದು ಎಂದರು.
ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಅಭಿನಂದನಾ ಭಾಷಣಗೈದರು. ಪತ್ರಕರ್ತ ಎಸ್.ಸತೀಶ್ ಕುಮಾರ್ ಕೋಟೇಶ್ವರ ಗುರುಗೌರವದ ಸಹಯೋಗ ವಹಿಸಿದ್ದರು. ಈ ಸಂದರ್ಭ ಪ್ರಸಾದ್ ಮೊಗೆಬೆಟ್ಟು ಅವರ ತಂದೆ ಹೆರಿಯ ನಾಯ್ಕ್ ಹಾಗೂ ತಾಯಿ ಗುಲಾಬಿ ಅವರನ್ನು ಗೌರವಿಸಲಾಯಿತು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಸಭಾಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಯ್ಯ ಯಕ್ಷಶ್ರೀ ಪ್ರತಿಷ್ಠಾನದ ಸ್ಥಾಪಕ ಋಷಿಕುಮಾರ್ ಮಯ್ಯ, ಭುವನಪ್ರಸಾದ್ ಹೆಗ್ಡೆ, ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಗೋಳಿಗರಡಿ ಮೇಳದ ಯಜಮಾನ ವಿಟ್ಠಲ ಪೂಜಾರಿ, ಪ್ರಸಂಗಕರ್ತ ಪವನ್ ಕಿರಣ್ ಕೆರೆ, ಯಕ್ಷಾಂತರಂಗ ಯಕ್ಷತಂಡದ ಸಂಚಾಲಕ ಕೃಷ್ಣಮೂರ್ತಿ ಉರಾಳ, ವಕೀಲ ಟಿ.ಮಂಜುನಾಥ ಗಿಳಿಯಾರು, ಪ್ರಸಂಗಕರ್ತೆ ಶಾಂತಾವಾಸುದೇವ ಆನಗಳ್ಳಿ,ಸಾಂಸ್ಕೃತಿಕ ಚಿಂತಕ ವಿಶ್ವನಾಥ ಶೆಣೈ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರುಳೀ ಕಡೇಕಾರ್, ಯಕ್ಷಗಾನ ಕಲಾವಿದ ಜಲವಳ್ಳಿ ವಿದ್ಯಾಧರ ರಾವ್, ಯಶಸ್ವಿ ಕಲಾವೃಂದದ ಮುಖ್ಯಸ್ಥ ವೆಂಕಟೇಶ್ ವೈದ್ಯ ಮೊದಲಾದವರಿದ್ದರು.
ಮೊಗಬೆಟ್ಟು ಅಭಿಮಾನಿ ಬಳಗದ ಅಧ್ಯಕ್ಷ ಶಶಾಂಕ್ ಪಾಟೀಲ್ ಸ್ವಾಗತಿಸಿ, ಸಂಚಾಲಕ ಕೋಡಿ ರಾಘವೇಂದ್ರ ಕರ್ಕೇರ ಪ್ರಾಸ್ತಾವಿಕ ಮಾತನಾಡಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಾಥ ಉರಾಳ ವಂದಿಸಿದರು.