ಡೈಲಿ ವಾರ್ತೆ: 05/NOV/2023

ಫರಂಗಿಪೇಟೆ : ಸೇವಾಂಜಲಿಯಿಂದ ಕ್ಷಯ ರೋಗಿಗಳಿಗೆ ಧವಸ ಧಾನ್ಯ ವಿತರಣೆ.

ಬಂಟ್ವಾಳ : ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರೂ ಕೂಡ ಆರೋಗ್ಯ ಕುರಿತು ವಿಶೇಷ ಕಾಳಜಿ ವಹಿಸುವುದು ಅತಿ ಅಗತ್ಯವಾಗಿದ್ದು, ಕ್ಷಯರೋಗಿಗಳು ಯಾವುದೇ ರೀತಿಯಲ್ಲಿ ಮಾನಸಿಕವಾಗಿ ಕುಗ್ಗದೆ ಸಮರ್ಪಕ ಔಷಧ, ಪೌಷ್ಟಿಕ ಆಹಾರ ಸೇವನೆಯಿಂದ ಗುಣಮುಖರಾಗಲು ಸಾಧ್ಯ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ‌.ತಿಮ್ಮಯ್ಯ ಎಚ್.ಆರ್.ಹೇಳಿದರು.

ಅವರು ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ರೋಗಗಳಿಗೆ ಆಹಾರ-ಧವಸ ಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೇವಾಂಜಲಿ ಪ್ರತಿಷ್ಠಾನವು ಉತ್ತಮ ಕಾರ್ಯ ಮಾಡುತ್ತಿದ್ದು, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎಂದರು.

ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ, ಜೀವನದಲ್ಲಿ ಆರೋಗ್ಯ ಅತಿ ಅಗತ್ಯವಾಗಿದ್ದು, ಶುದ್ಧ ನೀರು, ಗಾಳಿ, ಆಹಾರ ಸೇವನೆಯಿಂದ ನಮ್ಮ ಜೀವನ ಸುಂದರವಾಗುತ್ತದೆ. ಕ್ಷಯ ರೋಗಿಗಳ ಕಾಳಜಿಯಿಂದ ಆಹಾರ ವಿತರಿಸುವ ಸೇವಾಂಜಲಿ ಸಂಸ್ಥೆಯು ಪುಣ್ಯದ ಕಾರ್ಯ ಮಾಡುತ್ತಿದೆ ಎಂದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ಅವರು ಆಹಾರ- ಧವಸಧಾನ್ಯ ಪಡೆಯುವವರ ವಿವರ ನೀಡಿ ಪ್ರತಿಷ್ಠಾನದ ಸೇವಾ ಕಾರ್ಯಗಳ ಕುರಿತು ವಿವರಿಸಿದರು. ಜಿಲ್ಲಾ ಕ್ಷಯ ರೋಗ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಬದ್ರುದ್ದೀನ್ ಎಂ.ಎನ್., ಪೂಜೇಶ್ ಆಚಾರ್ಯ, ಕೃಷ್ಣ ತುಪ್ಪೆಕಲ್ಲು ವೇದಿಕೆಯಲ್ಲಿದ್ದರು.

ಇದೇ ವೇಳೆ ಸೇವಾಂಜಲಿಯಿಂದ ವಿದ್ಯಾರ್ಥಿ ವೇತನ ಪಡೆದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿ.ನಾರಾಯಣ ಮೇರಮಜಲು, ಶಿವರಾಜ್ ಸುಜೀರ್, ಎಂ.ಕೆ.ಖಾದರ್ ಮಾರಿಪಳ್ಳ, ಪ್ರಶಾಂತ್ ಕುಮಾರ್ ತುಂಬೆ, ದೇವದಾಸ್ ಶೆಟ್ಟಿ ಕೊಡ್ಮಾಣ್, ಸುಕುಮಾರ್ ಅರ್ಕುಳ, ಸುರೇಶ್ ರೈ ಪೆಲಪ್ಪಾಡಿ, ಬಸವರಾಜ್, ರಾಜೇಶ್ ಕಬೆಲ, ರಾಮದಾಸ್ ತೇವುಕಾಡು ಮೊದಲಾದವರು ಉಪಸ್ಥಿತರಿದ್ದರು.

ಸುಕೇಶ್ ಶೆಟ್ಟಿ ತೇವು ಕಾರ್ಯಕ್ರಮ ನಿರ್ವಹಿಸಿದರು.