



ಡೈಲಿ ವಾರ್ತೆ: 06/NOV/2023


ಎಟಿಎಂ ಪಿನ್ ಪಡೆದು ವಂಚನೆ: ಅಂತರಾಜ್ಯ ಕಳ್ಳರ ಬಂಧನ
ಕೋಲಾರ: ಸಹಾಯ ಮಾಡುವ ಸೋಗಿನಲ್ಲಿ ಅಮಾಯಕರ ಬಳಿ ಎಟಿಎಂ (ATM) ಪಿನ್ ಪಡೆದು ಹಣ ಎಗರಿಸುತ್ತಿದ್ದ ಮೂವರು ಅಂತರಾಜ್ಯ ಕಳ್ಳರನ್ನು ಮುಳಬಾಗಿಲು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ತಮಿಳುನಾಡಿನ ಹೊಸೂರು ಮೂಲದ ಮಂಜುನಾಥ್, ಚಿನ್ನದೊರೈ ಹಾಗೂ ಮಂಜುನಾಥ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 13 ಸಾವಿರ ನಗದು, ನಾಲ್ಕು ಎಟಿಎಂ ಕಾರ್ಡ್‍ಗಳು, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಎಟಿಎಂ ಬಳಿ ಹಣ ಡ್ರಾ ಮಾಡಲು ಸಹಾಯ ಕೇಳಿದವರ ಪಿನ್ ಪಡೆದು ವಂಚಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳು ಬೆಂಗಳೂರು ಸೇರಿದಂತೆ ಕೋಲಾರ, ಆಂದ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಲವು ವರ್ಷಗಳಿಂದ ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ. ಮೂರು ರಾಜ್ಯಗಳ ಪೊಲೀಸರಿಗೂ ಆರೋಪಿಗಳು ಹಲವಾರು ಪ್ರಕರಣದಲ್ಲಿ ಬೇಕಾಗಿದ್ದಾರೆ. ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.