ಡೈಲಿ ವಾರ್ತೆ: 07/NOV/2023

ಇಂದು, ನಾಳೆ ಅಬ್ಬರಿಸಲಿದೆ ಹಿಂಗಾರು ಮಳೆ: ರಾಜ್ಯದ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ ವರುಣ ಅಬ್ಬರಿಸಿದ್ದು, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸೋಮವಾರದಿಂದ ಎಡೆಬಿಡದಂತೆ ಮಳೆ ಸುರಿಯುತ್ತಿದೆ. ಇಂದು ಮತ್ತು ನಾಳೆ ಕೂಡ ಹಿಂಗಾರು ಮಳೆ ಅಬ್ಬರಿಸಲಿದ್ದು, ರಾಜ್ಯದ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ನಾಲ್ಕು ದಿನ ಗುಡುಗು, ಮಿಂಚು ಸಹಿತ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಮಂಗಳವಾರ ಹಾಗೂ ಬುಧವಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರತೀಯ ಹವಾಮಾನ ಇಲಾಖೆಯಿಂದ ಮಳೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಭಾರೀ ಗಾಳಿ ಸಹಿತ ಧಾರಾಕಾರ ಮಳೆ ಸಾಧ್ಯತೆ ಇದೆ.

ಗುಡುಗಿನ ಜೊತೆಗೆ ಮೇಲ್ಮೈ ಗಾಳಿ ಬಲವಾಗಿ ಬೀಸುವ ಸಾಧ್ಯತೆ ಇದ್ದು, ಮರದ ಕೆಳಗೆ, ತಾತ್ಕಾಲಿಕ ಶೆಲ್ಟರ್ ಕೆಳಗೆ ನಿಲ್ಲದಿರಿ ಎಂದು ಎಚ್ಚರಿಕೆ ನೀಡಲಾಗಿದೆ. ಬಲವಾದ ಗಾಳಿ ಜೊತೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಇಂದು ಮತ್ತು ನಾಳೆ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆಯ ನಂತರ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಸೋಮವಾರ ರಾಜಧಾನಿಯಲ್ಲಿ ಭಾರಿ ಮಳೆಯಾಗಿದೆ. ಹಿಂಗಾರು ಅಬ್ಬರಕ್ಕೆ ನಗರದ ಹಲವು ಪ್ರದೇಶಗಳು ಜಲಾವೃತವಾಗಿದೆ. ಸತತ ಮೂರ್ನಾಲ್ಕು ಗಂಟೆಗಳ ಕಾಲ ಎಡಬಿಡದೆ ಮಳೆ ಸುರಿದಿದೆ. ಭಾರಿ ಮಳೆಗೆ ಬೆಂಗಳೂರು ತತ್ತರಿಸಿದೆ. ಯಲಹಂಕದಲ್ಲಿ ಅತಿಹೆಚ್ಚು ಮಳೆಯಾಗಿದ್ದು, 14.7 ಸೆಂ.ಮೀ ಮಳೆ ದಾಖಲಾಗಿದೆ.