ಡೈಲಿ ವಾರ್ತೆ: 07/NOV/2023

ಸಮರ್ಪಕ ಬಿಸಿ ಊಟ, ಪೌಷ್ಟಿಕ ಆಹಾರ ನೀಡದ್ದಕ್ಕೆ ಮಕ್ಕಳೇ ಶಾಲೆಗೆ ಬೀಗ ಹಾಕಿ ಆಕ್ರೋಶ

ಗದಗ: ಸಮರ್ಪಕ ಬಿಸಿ ಊಟ, ಪೌಷ್ಟಿಕ ಆಹಾರ ನೀಡದ್ದಕ್ಕೆ ಮಕ್ಕಳು ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ವತಃ ಮಕ್ಕಳೇ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ಶಿಕ್ಷಕಿ ಎಎಸ್ ರಾಠೋಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 15 ದಿನಗಳಿಂದ ಮಕ್ಕಳಿಗೆ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆ ಹಣ್ಣು, ಪೌಷ್ಟಿಕ ಆಹಾರ ನೀಡುತ್ತಿಲ್ಲ. ಇನ್ನು ಮಧ್ಯಾಹ್ನ ಬಿಸಿ ಊಟ ಎಲ್ಲಾ ಮಕ್ಕಳಿಗೂ ಸಮರ್ಪಕವಾಗಿ ಕೊಡುತ್ತಿಲ್ಲ ಎಂಬ ಆರೋಪ ಮಕ್ಕಳದ್ದಾಗಿದೆ.

ಇಲ್ಲಿ 1 ರಿಂದ 7ನೇ ತರಗತಿಯವರೆಗೆ 441 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಮಧ್ಯಾಹ್ನ 2:30 ರಿಂದ 3 ಗಂಟೆಗೆ ತಡವಾಗಿ ಬಿಸಿ ಊಟ ನೀಡುತ್ತಾರೆ. ಜೊತೆಗೆ ಕೇವಲ 1-2 ಕೆಜಿ ತರಕಾರಿಯಲ್ಲಿ 441 ಮಕ್ಕಳಿಗೆ ಬಿಸಿ ಊಟ ಹಂಚಿಕೆ ಮಾಡುತ್ತಾರೆ. ಧಾನ್ಯಗಳಿಲ್ಲದ ಮಸಾಲೆ ಮಿಶ್ರಿತ ತಿಳಿ ಸಾರು, ಹುಳು ಹತ್ತಿದ, ಬಲಿತ, ಕೊಳೆತ ತರಕಾರಿ ತಂದು ಊಟ ತಯಾರಿಸುತ್ತಾರೆ. ಇದರಿಂದ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಮಕ್ಕಳದ್ದಾಗಿದೆ.

ಆದರೆ ಲೆಕ್ಕ ಪುಸ್ತಕದಲ್ಲಿ ಎಲ್ಲವನ್ನೂ ದಾಖಲು ಮಾಡಿರುತ್ತಾರೆ ಎಂಬ ಆರೋಪ ಪಾಲಕರದ್ದಾಗಿದೆ. ಮುಖ್ಯ ಶಿಕ್ಷಕಿ ಎಎಸ್ ರಾಠೋಡ್ ಬೇಡವೇ ಬೇಡ, ಮಕ್ಕಳ ಹಿತ ಕಾಪಾಡದ ಶಿಕ್ಷಕಿ ನಮ್ಮೂರ ಶಾಲೆಗೆ ಬೇರೆ ಕಡೆಗೆ ಎಂದು ಮಕ್ಕಳು, ಪಾಲಕರು ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಶಿಕ್ಷಣಾಧಿಕಾರಿಗಳು ಬರುವಂತೆ ಮಕ್ಕಳು ಆಗ್ರಹಿಸಿದ್ದಾರೆ. ಶಿಕ್ಷಕಿ ವರ್ಗಾವಣೆ ಆಗುವವರೆಗೆ ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದಿದ್ದಾರೆ.
ನಂತರ ಸ್ಥಳಕ್ಕೆ ಗಜೇಂದ್ರಗಡ ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌ಎನ್ ಹುರಳಿ ಭೇಟಿ ನೀಡಿ, ಮಕ್ಕಳು ಹಾಗೂ ಪಾಲಕರ ಮನವೊಲಿಸಲು ಮುಂದಾಗಿದ್ದಾರೆ. ಇಂದು ಮುಖ್ಯ ಶಿಕ್ಷಕಿ ರಜೆ ಇದ್ದು, ಆದಷ್ಟು ಬೇಗ ಪರಿಶೀಲನೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.