ಡೈಲಿ ವಾರ್ತೆ: 08/NOV/2023

ಪೊಲೀಸ್ ಇಲಾಖೆಯ ವಾಹನಗಳಿಗೆ ಕಾನೂನುಬದ್ಧ ಇನ್ಸೂರೆನ್ಸ್ ಇದೆ – ಪೋಲೀಸರ ಸ್ಪಷ್ಟಿಕರಣ

ಕುಂದಾಪುರ : ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳನ್ನು ಹೈವೇ ಗಸ್ತು ದಳದ ಪೊಲೀಸರು ತಡೆದು ದಾಖಲಾತಿಗಳನ್ನು ಪರಿಶೀಲಿಸುವಾಗ ಪೊಲೀಸ್ ವಾಹನಕ್ಕೇ ಇನ್ಶೂರೆನ್ಸ್ ಇಲ್ಲ ಎಂಬುದೊಂದು ದೊಡ್ಡ ಸುದ್ದಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿತ್ತು. ಓರ್ವ ವಾಹನ ಚಾಲಕನಿಗೆ ಸೀಟ್ ಬೆಲ್ಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ದಂಡ ವಿಧಿಸಿದಾಗ ಆತ ಪೊಲೀಸ್ ವಾಹನದ ಇನ್ಸೂರೆನ್ಸ್ ಬಗ್ಗೆ ಕೇಳಿದ್ದರು. ಮೊಬೈಲ್ ಆಪ್ ನಲ್ಲಿ ಚಾಲಕ ಪರಿಶೀಲಿಸಿದಾಗ ಹದಿನಾಲ್ಕು ವರ್ಷಗಳಿಂದ ಪೊಲೀಸ್ ವಾಹನಕ್ಕೆ ವಿಮೆ ಇಲ್ಲ ಎಂದು ತೋರಿಸಿತ್ತು! ಚಾಲಕ ಈ ಬಗ್ಗೆಯ ವಿಡಿಯೋವನ್ನು ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದು, ಅದು ವೈರಲ್ ಆಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಇಲಾಖೆ ಸ್ಪಷ್ಟಿಕರಣ ನೀಡಿದ್ದು, ಪೊಲೀಸ್ ವಾಹನಕ್ಕೆ ಕಾನೂನುಬದ್ಧ ವಿಮೆ ಇದೆ ಎಂದು ತಿಳಿದುಬಂದಿದೆ.
ಪೊಲೀಸ್ ಇಲಾಖೆಯ ವಾಹನಗಳಿಗೆ ಕೆ ಜಿ ಐ ಡಿ ಇನ್ಸೂರೆನ್ಸ್ ಇರುತ್ತದೆ. ಇಲಾಖೆಯೇ ಪ್ರತಿವರ್ಷವೂ ಅದನ್ನು ನವೀಕರಿಸುತ್ತದೆ. ಆದರೆ ಆರ್ ಟಿ ಓ ಆಪ್ ನಲ್ಲಿ ಈ ಕೆ ಜಿ ಐ ಡಿ ಇನ್ಸೂರೆನ್ಸ್ ಬಗ್ಗೆ ಮಾಹಿತಿ ತೋರಿಸುವುದಿಲ್ಲ. ವಾಹನ ಚಾಲಕರು ಈ ತಪ್ಪು ಗ್ರಹಿಕೆಯಿಂದ ಇಲಾಖೆ ವಾಹನಕ್ಕೆ ಹದಿನಾಲ್ಕು ವರ್ಷಗಳಿಂದ ವಿಮೆ ಇಲ್ಲ ಎಂದು ದೂರಿದ್ದಾರೆ. ಪೊಲೀಸ್ ಇಲಾಖೆ ನೀಡಿದ ಸ್ಪಷ್ಟಿಕರಣದಲ್ಲಿ ಕೆ ಜಿ ಐ ಡಿ ಇನ್ಸೂರೆನ್ಸ್ ದಾಖಲೆಯನ್ನು ನೀಡಿದ್ದು, 1221421ನೇ ನಂಬರ್ ಪಾಲಿಸಿ ಹೊಂದಿದ್ದು, ಮುಂಬರುವ ಜೂನ್ 23 ರ ತನಕ ಪೊಲೀಸ್ ಗಸ್ತು ವಾಹನಕ್ಕೆ ಇನ್ಸೂರೆನ್ಸ್ ಇದೆ.

ಬೈಂದೂರು ತಾಲೂಕು ಅರೆಹೊಳೆ ಕ್ರಾಸ್ ನಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುವಾಗ ಈ ಘಟನೆ ನಡೆದಿತ್ತು. ಇನ್ಸೂರೆನ್ಸ್ ಬಗ್ಗೆ ಸ್ಥಳದಲ್ಲೇ ಸ್ಪಷ್ಟಿಕರಣ ನೀಡಿದ ಪೊಲೀಸ್ ಅಧಿಕಾರಿ, ಇದು ಇಲಾಖಾ ವಾಹನ. ಇಲಾಖೆಯೇ ಇನ್ಸೂರೆನ್ಸ್ ಮಾಡಿಸಿರುತ್ತದೆ. ಹೆಚ್ಚಿನ ಮಾಹಿತಿ ಬೇಕಾದರೆ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೇಳಬಹುದು ಎಂದು ತಿಳಿಸಿದ್ದರು. ಜಾಲತಾಣದಲ್ಲಿ ವೈರಲ್ ಆದ ಸುದ್ದಿಯಿಂದ ಇಲಾಖೆಯ ಬಗ್ಗೆ ತಪ್ಪು ಕಲ್ಪನೆ ಬಾರದಿರಲಿ ಎಂಬ ಕಾರಣದಿಂದ ಈ ಸ್ಪಷ್ಟಿಕರಣ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.