ಡೈಲಿ ವಾರ್ತೆ: 09/NOV/2023

ಕೆರೆ ಬಳಿ ಪತ್ತೆಯಾದ ಮೊಸಳೆಯನ್ನು ಸೆರೆ ಹಿಡಿದು ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆಯ ಸಾಣಾಪೂರ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಮೊಸಳೆಯನ್ನು ಸಂರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ನಡೆದಿದೆ.

ಹಲವು ದಿನಗಳಿಂದ ಸಾಣಾಪೂರ ಕೆರೆಯ ತಟದಲ್ಲಿ ನಿತ್ಯವೂ ಮೊಸಳೆ ಪ್ರತ್ಯಕ್ಷವಾಗುತ್ತಿತ್ತು . ಕುರಿಗಾಯಿಗಳು, ದನ ಮೇಯಿಸುವವರು, ಪ್ರವಾಸಿಗರು ಮತ್ತು ಜಂಗ್ಲಿ, ರಂಗಾಪೂರಕ್ಕೆ ತೆರಳುವವರು ಭಯಭೀತಗೊಂಡಿದ್ದರು.


ಈ ಕುರಿತು ಗ್ರಾಮಸ್ಥರು ಅರಣ್ಯ ಮತ್ತು ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಗುರುವಾರ ಬೆಳಗಿನ ಜಾವ ಕೆರೆಯ ತಟದಲ್ಲಿ ಮೊಸಳೆ ಮಲಗಿದ್ದನ್ನು ಕಂಡ ಕೃಷಿ ಕಾರ್ಯಕ್ಕೆ ತೆರಳುವವರು ಮತ್ತು ವಾಕಿಂಗ್ ಗೆ ಆಗಮಿಸಿದವರು ಸೇರಿ ಹಗ್ಗದಿಂದ ಮೊಸಳೆಯನ್ನು ಕಟ್ಟಿ ಹಾಕಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಮೇಲಾಧಿಕಾರಿಗಳ ಆದೇಶದಂತೆ ಮೊಸಳೆಯನ್ನು ಬೇರೆಡೆ ಬಿಡಲಾಗುತ್ತದೆ ಮಾಧ್ಯಮಕ್ಕೆ ತಿಳಿಸಿದ್ದಾರೆ.