ಡೈಲಿ ವಾರ್ತೆ: 09/NOV/2023
ರಾಜ್ಯ ಸರ್ಕಾರ 10 ಸಾವಿರ ಕೋಟಿ ಬರ ಪರಿಹಾರ ಘೋಷಣೆ ಮಾಡದಿದ್ರೆ ಬಿಜೆಪಿಯಿಂದ ವಿಧಾನಸೌಧ ಮುತ್ತಿಗೆ: ಮಾಜಿ ಸಚಿವ ಕೋಟ ಎಚ್ಚರಿಕೆ
ರಾಮನಗರ: ರಾಜ್ಯ ಸರ್ಕಾರ ಈ ಕೂಡಲೇ 10 ಸಾವಿರ ಕೋಟಿ ರೂ. ಬರ ಪರಿಹಾರ ಘೋಷಣೆ ಮಾಡಿ. ಇಲ್ಲದೇ ಹೋದರೆ ಬಿಜೆಪಿಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ರಾಮನಗರಕ್ಕೆ ಆಗಮಿಸಿದ್ದ ಬಿಜೆಪಿ ಬರ ಅಧ್ಯಯನ ತಂಡ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸಪೂಜಾರಿ ನೇತೃತ್ವದಲ್ಲಿ ಬರ ಪರಿಶೀಲನೆ ಮಾಡಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯ ಸರ್ಕಾರ ಬರ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಈವರೆಗೂ ಯಾವೊಬ್ಬ ರೈತನಿಗೂ ಪರಿಹಾರ ನೀಡಿಲ್ಲ. ಕೇವಲ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡ್ತೀವಿ ಎಂದು ಸಿಎಂ ಹೇಳಿದ್ದಾರೆ. ಮೊದಲು ಸೂಕ್ತ ಪರಿಹಾರ ನೀಡದೇ ಕೇಂದ್ರದ ಕಡೆ ಕೈ ತೋರಿಸುತ್ತಿದ್ದಾರೆ. ಸುಖಾ ಸುಮ್ಮನೆ ಕೇಂದ್ರದ ಕಡೆ ಬೊಟ್ಟು ಮಾಡುವುದು ಬಿಟ್ಟು ಮೊದಲು ಪರಿಹಾರ ನೀಡಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 39 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾಳಾಗಿದೆ. 3 ಲಕ್ಷ ತೋಟಗಾರಿಕೆ ಬೆಳೆ ಹಾಳಾಗಿದೆ. 33 ಸಾವಿರ ಕೋಟಿ ನಷ್ಟ ಆಗಿರೋ ಬಗ್ಗೆ ಸಿದ್ದರಾಮಯ್ಯ ಹೇಳಿದ್ರು. ಮೊದಲು ನೀವು 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ. ಆಮೇಲೆ ಪ್ರಧಾನಿಯನ್ನು ಕೇಳೋಣ. ಆಗ ನಾವು ಜೊತೆಗೆ ಬರುತ್ತೇವೆ ಎಂದು ಹೇಳಿದರು.
ಜಾನುವಾರುಗಳ ಮೇವು ಹಾಗೂ ಗೋಶಾಲೆಗಳ ಸಮಸ್ಯೆ ಆಗಿದೆ. ರೈತರು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇದೆ. ಕೂಡಲೇ 10 ಸಾವಿರ ಕೋಟಿ ರೂ. ಪರಿಹಾರ ಘೋಷಣೆ ಮಾಡಿ. ಇಲ್ಲವಾದರೆ ಮಾಜಿ ಸಿಎಂ ಬಿಎಸ್‌ವೈ, ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.