ಡೈಲಿ ವಾರ್ತೆ: 10/NOV/2023
ಕೋಟೇಶ್ವರ ಕೊಡಿಹಬ್ಬ ಪ್ರಕ್ರಿಯೆಗಳಿಗೆ ಚಾಲನೆ – ರಥಾಲಯದಿಂದ ಹೊರಬಂದ ಬ್ರಹ್ಮರಥ
ಕೋಟೇಶ್ವರ : ಉಡುಪಿ ಜಿಲ್ಲೆಯ ಅತಿ ದೊಡ್ಡ ವಾರ್ಷಿಕ ಜಾತ್ರೆ, ಕೋಟೇಶ್ವರದ ಕೊಡಿಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಕಳೆದ ವರ್ಷದ ಕೊಡಿಹಬ್ಬದ ನಂತರ ರಥಾಲಯ ಸೇರಿ ಬೆಚ್ಚಗಿದ್ದ ಆರು ಚಕ್ರಗಳ ಬ್ರಹ್ಮ ರಥವನ್ನು ಬುಧವಾರ ಸಂಜೆ ರಥಾಲಯದಿಂದ ಹೊರ ತರಲಾಗಿದೆ. ಎಂಟು ಅಡಿ ವ್ಯಾಸದ ಆರು ಚಕ್ರಗಳು, ಮೂರು ಹಂತಗಳನ್ನು ಹೊಂದಿದ ಹದಿನೆಂಟು ಅಡಿ ಎತ್ತರದ ಸ್ಥಿರ ರಥವನ್ನು ನೆರೆದ ಭಕ್ತಾಭಿಮಾನಿಗಳು, ದೇವಳ ಸಿಬ್ಬಂದಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಹರಹರ ಮಹಾದೇವ ಘೋಷಣೆಯೊಂದಿಗೆ ಉತ್ಸಾಹದಿಂದ ಹೊರಗೆಳೆದು ತಂದರು.
ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪ ನಾಯಕ ನಿರ್ಮಿಸಿಕೊಟ್ಟರು ಎಂದು ಹೇಳಲಾಗುವ, ಸುಮಾರು ಐನೂರು ವರ್ಷಗಳ ಪುರಾತನವಾದ ಈ ಬೃಹತ್ ರಥವನ್ನು ಸ್ಯಂದನ ಮಹಾರಥ ಎಂದು ಕರೆಯಲಾಗುವುದು. ಅಡಿಪಾಯ, ಅಧಿಷ್ಠಾನ, ಮಂಟಪ, ಗೋಪುರ ಹಾಗೂ ಶಿಖರ ಎಂಬ ಐದು ಹಂತಗಳನ್ನು ಹೊಂದಿದ ಬ್ರಹ್ಮ ರಥವನ್ನು ಶ್ರೀ ಕೋಟಿಲಿಂಗೇಶ್ವರ ದೇವರ ಜಾತ್ರೆಗಾಗಿ ಸಜ್ಜುಗೊಳಿಸಲಾಗುವುದು. ಸ್ಥಿರ ರಥ ಅಥವಾ ರಥದ ಗಡ್ಡೆ ಎಂದು ಕರೆಯಲಾಗುವ ಇದರ ಮೇಲೆ ಕೆಂಪು, ಬಿಳಿ ಪತಾಕೆಗಳು, ವೃತ್ತಕಾರದ ಅಟ್ಟೆಗಳು, ವರ್ಣಪಟಗಳು, ದಿಕ್ಪಾಲಕರ ಪಟಗಳನ್ನು ಕಟ್ಟಿ, ತಳಿರು ತೋರಣ, ಕಬ್ಬು, ಫಲಗಳಿಂದ ಸಿಂಗರಿಸಲಾಗುವುದು.
ನ. 15 ರ ಬುಧವಾರ ನಸುಕಿನ ಐದು ಗಂಟೆಗೆ ದೇವಳ ತಂತ್ರಿ ವೇದಮೂರ್ತಿ ಪ್ರಸನ್ನ ಕುಮಾರ ಐತಾಳರ ನೇತೃತ್ವದಲ್ಲಿ ರಥ ಮುಹೂರ್ತ ನಡೆಯಲಿದೆ. ಅಷ್ಟ ದಿಕ್ಪಾಲಕರ ಸಹಿತವಾಗಿ ರಥಾಧೀಶನಿಗೆ ವಿದ್ಯುಕ್ತ ಪೂಜೆ ಸಲ್ಲಿಸಲಾಗುವುದು. ಅಂದಿನಿಂದ ದೇವಾಡಿಗ ಸಮುದಾಯದವರು ರಥ ಕಟ್ಟಲು ಪ್ರಾರಂಭಿಸುತ್ತಾರೆ. ರಥ ಕಟ್ಟುವುದರಲ್ಲಿ ನಿಪುಣರಾದ ಅವರದು ಅನಾದಿ ಕಾಲದಿಂದಲೂ ನಡೆದುಬಂದ ಸೇವೆ.
ನ. 27 ನೇ ಕಾರ್ತಿಕ ಶುದ್ಧ ಸೋಮವಾರ “ಭುವನೋತ್ಸವ” ಎಂದೇ ಕರೆಯಲ್ಪಡುವ ವೈಭವದ ಕೊಡಿಹಬ್ಬ ನೆರವೇರಲಿದೆ.