ಡೈಲಿ ವಾರ್ತೆ: 27/NOV/2023
” ಕೋಟಿ ಮುನಿಗಳು ತಪಸ್ಸು ಮಾಡಿದ ಐತಿಹಾಸಿಕ ಕೋಟಿಲಿಂಗೇಶ್ವರನ “ಕೊಡಿ ಹಬ್ಬ” ಸಂಭ್ರಮ…!” ನೂತನ ವಧು – ವರರು ಕೋಟಿಲಿಂಗೇಶ್ವರನ ಬಳಿ “ಕಬ್ಬಿನ ಕೊಡಿ” ತಂದರೆ ಮುಂದಿನ ವರ್ಷವೇ ಸಂತಾನ ಭಾಗ್ಯ ದೊರೆಯುವ ಎನ್ನುವ ದಂತಕಥೆ ಇಂದಿಗೂ ಪ್ರತೀತಿ …..!” ಇಂದು ಕೊಡಿ ಹಬ್ಬ ಸಂಭ್ರಮ….!”
ಕೊಡಿ ಹಬ್ಬ ವಿಶೇಷ ಬರಹ:
ಕುಂದಾಪುರ ತಾಲೂಕಿನ ಆಚರಣೆಯಲ್ಲಿ ಪ್ರಾಕೃತಿಕ ದತ್ತವಾಗಿ ಮತ್ತು ದೈವದತ್ತವಾಗಿ ಬಂದ ಕಲೆಗಳಲ್ಲಿ ವಿಶಿಷ್ಟ ಸಂಪ್ರದಾಯವನ್ನು ಹಾಸು ಹೊಕ್ಕಾಗಿರುವ ಆಚರಣೆಯಲ್ಲಿ ಕೊಡಿ ಹಬ್ಬವು ವಿಶಿಷ್ಟ ಹಾಗೂ ವಿಭಿನ್ನವಾಗಿ ನಡೆಯುತ್ತದೆ. ಮದುವೆಯಾದಂತಹ ನೂತನ ದಂಪತಿಗಳು ಕೊಡಿ ಹಬ್ಬದ ಜಾತ್ರೆಗೆ ಹೋಗಿ ಕಬ್ಬಿನ ಕೊಡಿಯನ್ನು ತೆಗೆದುಕೊಂಡು ಮನೆ ಸೇರಿದರೆ, ಮುಂದಿನ ವರ್ಷವೇ ನಿಮಗೊಂದು ಕೊಡಿ ಹುಟ್ಟುತ್ತದೆ ಎನ್ನುವುದು ಕುಂದಾಪುರ ಆಡು ಭಾಷೆಯಲ್ಲಿ ಪ್ರತಿಯಾಗಿದೆ. ಇಲ್ಲಿ ಕೊಡಿ ಎಂದರೆ ಹೊಸದೊಂದು ಮೊಗದೊಂದು ಅರ್ಥ ಎಂದಿಗೂ ಪದ್ಧತಿಯಲ್ಲಿದೆ.
27.11.2023ರಂದು ಕೊಡಿಹಬ್ಬ. ಕೋಟೇಶ್ವರ ರಥೋತ್ಸವ. ಕೋಟೇಶ್ವರಕ್ಕೆ ಧ್ವಜಪುರ ಎಂಬ ಹೆಸರೂ ಇದೆ. ಕೋಟೇಶ್ವರ ಪರಶುರಾಮ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ ಒಂದು. ಪ್ರತೀವರ್ಷ ಕಾರ್ತಿಕ ಶುದ್ಧ ಪೌರ್ಣಮಿಯಂದು ಕೊಡಿಹಬ್ಬ ನಡೆಯುತ್ತದೆ.
ಕೊಡಿ ಹಬ್ಬದ ವಿಶೇಷ ಇತಿಹಾಸ:-
ಒಂದು ಕಾಲದಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿತ್ತಂತೆ. ಆಗ ವಿಭಾಂಡ ಮುನಿಯ ನೇತ್ರತ್ವದಲ್ಲಿ ಕೋಟಿ ಮುನಿಗಳು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡರಂತೆ. ಒಲಿದ ಪರಮೇಶ್ವರ ಇಲ್ಲಿ ಕೋಟಿ ಲಿಂಗಗಳ ರೂಪದಲ್ಲಿ ನೆಲೆಸಿ, ಬರಗಾಲವನ್ನು ದೂರಮಾಡಿ ಜನರನ್ನು ಪೊರೆದನಂತೆ. ಕೋಟಿ ಲಿಂಗಗಳಲ್ಲಿ ಐಕ್ಯನಾದ ಈಶ್ವರ ಕೋಟಿಲಿಂಗೇಶ್ವರ ಎಂಬ ಹೆಸರು ಪಡೆದನಂತೆ.
ನವವಿವಾಹಿತ ಜೋಡಿಗಳು ತಪ್ಪದೇ ಕೊಡಿಹಬ್ಬಕ್ಕೆ ಹೋಗಿ ದೇವರ ಅನುಗ್ರಹ ಹೊಂದಬೇಕೆಂದು ಇಲ್ಲಿಯ ನಂಬಿಕೆ. ಕರಾವಳಿಯಲ್ಲೇ ದೊಡ್ಡದಾದ ಕೋಟಿತೀರ್ಥ ಪುಷ್ಕರಿಣಿಯಲ್ಲಿ ಮುಳುಗೆದ್ದು, ಸುತ್ತುಬಂದು ವಂದಿಸಿ, ಕೋಟಿಲಿಂಗೇಶ್ವರನ ಬಲಬದಿಯಲ್ಲಿರುವ ‘ಮೂಲೆಗಣಪತಿ’ಗೆ ಮೊದಲ ನಮಸ್ಕಾರ ಸಲ್ಲಿಸಿ, ಕೋಟಿಲಿಂಗೇಶ್ವರನ ಆಶೀರ್ವಾದ ಪಡೆದು, ರಥೋತ್ಸವದ ಆನಂದವನ್ನು ಅನುಭವಿಸಿ, ಮರಳಿ ಮನೆಗೆ ಹೋಗುವಾಗ ಕಬ್ಬಿನ ಕೊಡಿಯನ್ನು ಕೊಂಡು ಹೋಗಬೇಕೆಂಬ ರಿವಾಜು ಇಲ್ಲಿದೆ. ವಸುಪುರದ (ಬಸ್ರೂರು) ರಾಜ ವಸುಚಕ್ರವರ್ತಿಗೆ ಮಕ್ಕಳಿರಲಿಲ್ಲ. ಕೋಟಿಲಿಂಗೇಶ್ವರನಿಗೆ ದೇವಸ್ಥಾನ ಕಟ್ಟಿಸುವುದಾಗಿ ಹರಕೆ ಹೇಳಿಕೊಂಡಾಗ ಅವನಿಗೆ ಸಂತಾನ ಪ್ರಾಪ್ತಿಯಾಯಿತಂತೆ. ಹೇಳಿಕೊಂಡ ಹರಕೆಯಂತೆ ವಸುರಾಜ ದೇವಸ್ಥಾನವನ್ನೂ, ವಿಶಾಲವಾದ ಪುಷ್ಕರಿಣಿಯನ್ನೂ ನಿರ್ಮಿಸಿದನಂತೆ. ರಥೋತ್ಸವ ನಡೆಸುವ ಬಯಕೆಯಿಂದ ಬ್ರಹ್ಮರಥ ನಿರ್ಮಾಣವನ್ನೂ ಪ್ರಾರಂಭ ಮಾಡಿದನಂತೆ. ಆದರೆ ನಿಗದಿತ ಸಮಯಕ್ಕೆ ರಥ ಪೂರ್ಣವಾಗದೆ ಇದ್ದುದರಿಂದ ಬಿದಿರು ಮತ್ತು ಕಬ್ಬಿನ ಕೊಡಿಗಳಿಂದ ರಥ ತಯಾರಿಸಿ ರಥೋತ್ಸವ ನಡೆಸಿದನಂತೆ. ಕೊಡಿ ಕಬ್ಬಿನ ಜಲ್ಲೆಗಳಿಂದ ರಥ ತಯಾರಿಸಿದ್ದರಿಂದ ‘ಕೊಡಿಹಬ್ಬ’ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಬಳಿಕ ಕೋಟೇಶ್ವರದ ದೊಡ್ಡ ಗಾತ್ರದ ಬ್ರಹ್ಮರಥ ಪೂರ್ಣಗೊಂಡಿತಂತೆ
ಇಲ್ಲಿ ತೇರು ಎಳೆಯುವ ಸಂದರ್ಭ ಗರುಡ ದರ್ಶನ ಭಕ್ತರ ಮನಸ್ಸನ್ನು ಸೂರೆಗೊಳ್ಳುವ ಒಂದು ವಿದ್ಯಮಾನ.
ದೇವಸ್ಥಾನದ ಕೆರೆ ನಾಲ್ಕೂವರೆ ಎಕರೆ ವಿಸ್ತೀರ್ಣ ಹೊಂದಿದ್ದು ಇದು ಕೋಟಿತೀರ್ಥವೆಂದು ಹೆಸರು ಪಡೆದಿದೆ. ಈ ಕೆರೆಯಲ್ಲಿ ಹದಿನೆಂಟು ಪುಣ್ಯನದಿಗಳ ಸಂಗಮವಿದೆ ಎಂದು ಹೇಳುತ್ತಾರೆ. ಈ ಪುಷ್ಕರಿಣಿಯ ಸುತ್ತ ಸುತ್ತಕ್ಕಿ ಸೇವೆ ನಡೆಯುತ್ತದೆ. ಹೊಸ ಮದುಮಕ್ಕಳು ಕೆರೆದಂಡೆಯ ಸುತ್ತ ಸುತ್ತಕ್ಕಿ ತಳಿಯುವುದರಿಂದ ಅವರ ಮನದ ಅಭೀಷ್ಟಗಳು ಸಿದ್ಧಿಸುತ್ತವೆ.
ಕೋಟೇಶ್ವರದ ಕೋಟಿತೀರ್ಥ ಮತ್ತು ವಂಡಾರು ಕಂಬಳ ಗದ್ದೆಗಳನ್ನು ಒಂದೇ ರಾತ್ರಿ ನಿರ್ಮಿಸಿದರಂತೆ. ಕೊಡಿಹಬ್ಬದ ದಿನ ವಂಡಾರು ಕಂಬಳ ಗದ್ದೆಯಲ್ಲಿ ದೂಳು ಏಳುತ್ತದೆ ಮತ್ತು ವಂಡಾರು ಕಂಬಳದ ದಿನ ಕೋಟಿ ತೀರ್ಥದಲ್ಲಿ ಕೆಸರು ಏಳುತ್ತದೆ ಎನ್ನುತ್ತಾರೆ.
ಇಲ್ಲಿನ ಬ್ರಹ್ಮರಥದ ಬಗ್ಗೆ ಇರುವ ಕಲ್ಪನೆ ಹೀಗಿದೆ. ರಥದ ಆರು ಚಕ್ರಗಳು ಆರು ಋತುಗಳು. ಮೇಲಿನ ಹನ್ನೆರಡು ತೊಲೆಗಳು ಹನ್ನೆರಡು ತಿಂಗಳುಗಳು. ಮುಂದಿನ ಬಾಗಿಲು ಹಗಲಾದರೆ ಹಿಂದಿನ ಬಾಗಿಲು ರಾತ್ರಿ. ಎರಡು ಬದಿಯ ಬಾಗಿಲುಗಳು ಎರಡು ಸಂಧ್ಯಾಕಾಲಗಳು. ರಥದ ಪತಾಕೆಗಳು ಯಾಮಗಳು, ಮುಹೂರ್ತಗಳು,ಗಳಿಗೆಗಳು. ಶಿಖರ ಹುಣ್ಣಿಮೆಯ ಪೂರ್ಣಚಂದ್ರ. ಹೀಗೆ ಕೋಟಿಲಿಂಗೇಶ್ವರ ವರ್ಷಕ್ಕೊಮ್ಮೆ ವರ್ಷರೂಪವಾದ ರಥವನ್ನೇರಿ ಲೋಕ ಕಲ್ಯಾಣಾರ್ಥವಾಗಿ ಸಂಚರಿಸುವುದೇ ಬ್ರಹ್ಮರಥೋತ್ಸವ.
ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಕೋಟೇಶ್ವರದ ಶ್ರೀ ಮನ್ಮಹಾರಥೋತ್ಸವ (ಕೊಡಿ ಹಬ್ಬ) ದಿನಾಂಕ 27.11.2023ನೇ ಸೋಮವಾರ ನಡೆಯಲಿದೆ. ಬನ್ನಿ, ಕೊಡಿಹಬ್ಬದ ಸಂಭ್ರಮವನ್ನು ಸವಿದು, ಕುಂದಾಪುರ ತಾಲೂಕಿನ ಅತಿ ದೊಡ್ಡ ಹಬ್ಬಗಳಲ್ಲಿ ಕೋಟೇಶ್ವರದ ಕೊಡಿ ಹಬ್ಬ ಜಾತ್ರೆಯು ಜಗತ್ಪ್ರಸಿದ್ಧ.