ಡೈಲಿ ವಾರ್ತೆ: 26/NOV/2023

ಬಂಟ್ವಾಳ: ಅಕ್ಕಪಕ್ಕದ ಮನೆಯ ಯುವಕ, ಯುವತಿ ಒಂದೇ ದಿನ ನಾಪತ್ತೆ – ದೂರು ದಾಖಲು

ಬಂಟ್ವಾಳ : ಅಕ್ಕಪಕ್ಕದ ಮನೆಯ ಯುವಕ ಮತ್ತು ಯುವತಿ ಇಬ್ಬರೂ ಒಂದೇ ದಿನ ನಾಪತ್ತೆಯಾದ ಘಟನೆಯೊಂದು ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಸಜಿಪ ಮುನ್ನೂರು ಗ್ರಾಮದ ಉದ್ದೋಟು ಎಂಬಲ್ಲಿ ನಡೆದಿದೆ.

ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಪುತ್ರಿ ಆಯಿಸತ್ ರಸ್ಮಾ (18) ಮತ್ತು ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ (23) ಕಾಣೆಯಾದವರು.

ದೇರಳಕಟ್ಟೆಯ ನಡುಪದವು ಪಿ.ಎ.ಕಾಲೇಜಿನಲ್ಲಿ ಫಾರ್ಮಸಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಆಯಿಸತ್ ರಸ್ಮಾ ಒಂದು ವಾರಗಳ ಕಾಲ ರಜೆಯಿದ್ದ ಕಾರಣ ಈಕೆ ಮನೆಯಲ್ಲಿದ್ದಳು. ನ.22 ರಾತ್ರಿ ಮನೆಯವರ ಜೊತೆ ಮಲಗಿದ್ದ ಈಕೆ ಬೆಳಿಗ್ಗೆ ಎದ್ದು ನೋಡುವಾಗ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಿನಾನ್ ಕೆಲ ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಇತ್ತೀಚೆಗೆ ಮರಳಿ ಊರಿಗೆ ಬಂದಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದು ಈತ ಕೂಡ ನ.22. ರಂದು ಮನೆಯವರ ಜೊತೆಗೆ ಮಲಗಿದ್ದು, ನ.23.ರಂದು ಬೆಳಿಗ್ಗೆ ಕಾಣೆಯಾಗಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ಅಕ್ಕಪಕ್ಕದ ನಿವಾಸಿಯಾಗಿರುವ ಇವರಿಬ್ಬರು ಪರಿಚಯಸ್ಥರಾಗಿದ್ದು ಸಲುಗೆಯಿಂದ ಇದ್ದರು ಎನ್ನಲಾಗಿದ್ದು ಒಂದೇ ದಿನ ಕಾಣೆಯಾಗಿರುವುದರ ಹಿಂದೆ ಪ್ರೇಮ ಪ್ರಣಯದ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. .

ಎರಡು ಮನೆಯವರ ಪೋಷಕರು ಕಾಣೆಯಾದ ಇಬ್ಬರನ್ನು ಹುಡುಕಿಕೊಡುವಂತೆ ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.