ಡೈಲಿ ವಾರ್ತೆ: 14/Jan/2024

ಉಡುಪಿ: ಲೀಸ್ಗೆ ಕೊಟ್ಟ ಹೋಟೆಲ್ನಲ್ಲಿ ಅಕ್ರಮ ಚಟುವಟಿಕೆ, ಕೇಳಲು ಹೋದ ಮಾಲೀಕಿ ಮೇಲೆ ದೌರ್ಜನ್ಯ

ಉಡುಪಿ: ಲೀಸ್ಗೆ ಕೊಟ್ಟ ಹೋಟೆಲ್ನಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಹೋಟೆಲ್ ಲೀಸ್ ವಾಪಸ್ ಪಡೆಯಲು ಹೋದ ಮಾಲೀಕಿ ಮೇಲೆಯೇ ದೌರ್ಜನ್ಯ ಎಸಗಿರುವ ಘಟನೆ ಭಾನುವಾರ ನಡೆದಿದೆ.

ಉಡುಪಿ ನಗರದ KSRTC ಬಸ್ ನಿಲ್ದಾಣ ಬಳಿ ಇರುವ ಶಾಂಭವಿ ಫಾರ್ಚೂನ್ ಹೊಟೇಲ್ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಮಾಹಿತಿ ತಿಳಿಯುತ್ತಿದ್ದಂತೆ ಮಾಲೀಕಿ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದು ಮಾಲೀಕಿ ಮೇಲೆಯೇ ದೌಜನ್ಯ ಎಸಗಲಾಗಿದೆ.

2021ರಲ್ಲಿ ದಿನೇಶ್ ಶೆಟ್ಟಿ ಎಂಬುವರಿಗೆ ಮಮತಾ ಶೆಟ್ಟಿ ಅವರು 10 ವರ್ಷಕ್ಕೆ ಹೋಟೆಲ್ ಲೀಸ್ಗೆ ನೀಡಿದ್ದರು. ಅಗ್ರಿಮೆಂಟ್ ಕೂಡ ಮಾಡಲಾಗಿತ್ತು. ಆದರೆ ದಿನೇಶ್ ಶೆಟ್ಟಿ ಹೋಟೆಲ್ ಕಟ್ಟಡವನ್ನು ದುರುಪಯೋಗ ಪಡಿಸಿಕೊಂಡಿದ್ದ. ಹೋಟೆಲ್ ರೂಂಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ.
ಕಳೆದ ವರ್ಷ ವೇಶ್ಯಾವಾಟಿಕೆ ಹಿನ್ನೆಲೆ ಪೊಲೀಸ್ ದಾಳಿ ನಡೆದಿತ್ತು. ಹೀಗಾಗಿ ಡಿಸೆಂಬರ್ 22 ರಂದು ಮಮತಾ ಶೆಟ್ಟಿ ಅವರು ಹೋಟೆಲ್ಗೆ ಹೋಗಿ ಲೀಸ್ ಅಗ್ರಿಮೆಂಟ್ ಕ್ಯಾನ್ಸಲ್ ಮಾಡಿ ಹೋಟೆಲ್ ವಾಪಸ್ ನೀಡುವಂತೆ ದಿನೇಶ್ ಶೆಟ್ಟಿಗೆ ಸೂಚಿಸಿದ್ದರು. ಇದರಿಂದ ಕೋಪಗೊಂಡ ದಿನೇಶ್ ಶೆಟ್ಟಿ ಹೋಟಲ್ನಲ್ಲೇ ಹಲ್ಲೆ ಮಾಡಿದ್ದಾನೆ.

ಮಗನೊಂದಿಗೆ ತೆರಳಿದ್ದ ಮಮತಾ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾನೆ. ಹೋಟೆಲ್ನಲ್ಲಿರುವ ಸಿಸಿಟಿವಿಯಲ್ಲಿಯೂ ಹಲ್ಲೆ ದೃಶ್ಯ ಸೆರೆಯಾಗಿದೆ. ದಿನೇಶ್ ಶೆಟ್ಟಿ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಟೆಲ್ ವಾಪಸ್ ಕೊಡಿಸುವಂತೆ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಎಫ್ಐಆರ್ ಆದ್ರೂ ಸೂಕ್ತ ತನಿಖೆ ನಡೆದಿಲ್ಲ ಎಂದು ಆರೋಪ ಮಾಡಿದ್ದಾರೆ.