ಡೈಲಿವಾರ್ತೆ: 16/ನ./2026

ಬ್ರಹ್ಮಾವರ: ನಿಯಂತ್ರಣ ತಪ್ಪಿ ಮನೆಯ ಪಾಗರಕ್ಕೆ ಕಾರು ಡಿಕ್ಕಿ – ಗಂಭೀರವಾಗಿ ಗಾಯಗೊಂಡಿದ್ದ 73 ವರ್ಷದ ವೃದ್ಧ ಸಾವು

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಕುಮ್ರಗೋಡು ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮನೆಯ ಪಾಗರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 73 ವರ್ಷದ ವೃದ್ಧರೊಬ್ಬರು ಮೃತಪಟ್ಟ ಘಟನೆ ನ.16ರ ಸೋಮವಾರ ಮುಂಜಾನೆ ಸಂಭವಿಸಿದೆ.

ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA-19-MM-4523 ಸಂಖ್ಯೆಯ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಬೆಳಿಗ್ಗೆ ಸುಮಾರು 6:15ಕ್ಕೆ ಕುಮ್ರಗೋಡು ಸಮೀಪದ ಏಕಮುಖ ರಸ್ತೆಯಲ್ಲಿ ಚಾಲಕ ನಯಾಜ್ ಅವರು ಕಾರನ್ನು ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮನೆಯ ಪಾಗರಕ್ಕೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಶೇಖ್ ವಾಜಿದ್ ಮಿರ್ಜಾ (73) ಅವರ ದೇಹದ ವಿವಿಧ ಭಾಗಗಳಿಗೆ, ವಿಶೇಷವಾಗಿ ತಲೆ ಮತ್ತು ಕಣ್ಣಿನ ಭಾಗಕ್ಕೆ ಗುದ್ದಿದ ಹಾಗೂ ತರಚಿದ ಗಾಯಗಳಾಗಿದ್ದವು. ತೌಫಿಕ್ ಅವರಿಗೂ ಕೈ, ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿವೆ. ಕಾರಿನಲ್ಲಿದ್ದ ನಬಾನ್ ಹಾಗೂ ಚಾಲಕ ನಯಾಜ್ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ತಕ್ಷಣ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ತಲೆಗೆ ಗಂಭೀರ ಗಾಯಗೊಂಡಿದ್ದ ಶೇಖ್ ವಾಜಿದ್ ಮಿರ್ಜಾ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 10:30ರ ಸುಮಾರಿಗೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಈ ಕುರಿತು ಮಿಜ್ಬಾನ್ (35), ತಂದೆ ಜಾಕೀರ್ ಹುಸೇನ್, ಕೊಳಂಬೆ, ಹೆರೂರು ಗ್ರಾಮ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 213/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 281, 125(a), 125(b) ಹಾಗೂ 106ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.