ಡೈಲಿ ವಾರ್ತೆ: 08/Feb/2024
ದಕ್ಷಿಣ ಕನ್ನಡ: ಅಕ್ರಮವಾಗಿ ಗಾಂಜಾ ಸಾಗಾಟ – ಸಿಸಿಬಿ ಪೊಲೀಸರ ಕಾರ್ಯಾಚರಣೆ ಇಬ್ಬರ ಬಂಧನ, 28 ಲಕ್ಷ ಮೌಲ್ಯದ 120 ಕೆಜಿ ಗಾಂಜಾ ವಶ
ಮಂಗಳೂರು: ಒರಿಸ್ಸಾದಿಂದ ಮಂಗಳೂರು ಹಾಗೂ ಕೇರಳಕ್ಕೆ ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 120 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕೇರಳದ ವಯನಾಡು ಜಿಲ್ಲೆಯ ಅನೂಪ್ ಎಂ.ಎಸ್(28) ಮತ್ತು ಕಣ್ಣೂರು ಜಿಲ್ಲೆಯ ಲತೀಫ್ ಕೆ.ವಿ (36), ಎಂದು ಗುರುತಿಸಲಾಗಿದೆ.
ಸಿಸಿಬಿ ಪೊಲೀಸರು ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ 28 ಲಕ್ಷ ರೂ. ಮೌಲ್ಯದ 120 ಕೆಜಿ ಗಾಂಜಾ, 3 ಮೊಬೈಲ್ ಫೋನ್ಗಳು, 4,020 ರೂ. ನಗದು ಹಾಗೂ ಜೀಪು ವಶಪಡಿಸಿದ್ದಾರೆ. ಇವುಗಳ ಒಟ್ಟು ಮೌಲ್ಯ 35,14,520 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಒರಿಸ್ಸಾದಿಂದ ಅಂಧ್ರಪ್ರದೇಶ, ಬೆಂಗಳೂರು ಮೂಲಕ ಗಾಂಜಾವನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದರು. ಗಾಂಜಾವನ್ನು ಕಳ್ಳ ಸಾಗಾಣಿಕೆ ಮಾಡುವ ಸಲುವಾಗಿ ಆರೋಪಿಗಳು ಬೋಲೆರೋ ವಾಹನದ ಹಿಂಬದಿಯ ಢಿಕ್ಕಿಯಲ್ಲಿ ಪ್ರತ್ಯೇಕವಾದ ಒಂದು ಕಬ್ಬಿಣದ ಬಾಕ್ಸ್ ಮಾಡಿಕೊಂಡಿದ್ದರು. ಈ ಗಾಂಜಾ ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.