ಡೈಲಿ ವಾರ್ತೆ: 11/Mar/2024
ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತರಿಂದಲೇ ‘ಶೋಭಾ ಗೋ ಬ್ಯಾಕ್’ ಘೋಷಣೆ
ಚಿಕ್ಕಮಗಳೂರು: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪತ್ರ ಚಳವಳಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ‘ಗೋ ಬ್ಯಾಕ್ ಶೋಭಕ್ಕ’ ಚಳವಳಿ ಜಿಲ್ಲೆಯಲ್ಲಿ ಈಗ ತೀವ್ರಗೊಂಡಿದ್ದು, ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲೇ ಭಾನುವಾರ ಗದ್ದಲ ಎಬ್ಬಿಸಿ ಆಕ್ರೋಶ ವ್ಯಕ್ತಪಡಿಸಿದರು.
ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹಕ್ಕಾಗಿ ಚುನಾವಣಾ ಉಸ್ತುವಾರಿ ಸಂಚಾಲಕ ಭಾನುಪ್ರಕಾಶ್ ಹಾಗೂ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಚುನಾವಣಾ ನಿರ್ವಹಣಾ ಸಮಿತಿಯ ಸಭೆ ಭಾನುವಾರ ನಡೆಯಿತು. ಆರಂಭದಲ್ಲೇ ವೇದಿಕೆ ಬಳಿಗೆ ಬಂದ ಕಾರ್ಯಕರ್ತರು, ‘ಶೋಭಾ ಕರಂದ್ಲಾಜೆ ಅವರನ್ನು ಅಭ್ಯರ್ಥಿ ಮಾಡಬಾರದು. ಚಿಕ್ಕಮಗಳೂರು ಜಿಲ್ಲೆಯವರಿಗೇ ಟಿಕೆಟ್ ನೀಡಬೇಕು. 10 ವರ್ಷಗಳಿಂದ ಸಂಸದೆಯಾಗಿರುವ ಶೋಭಾ ಅವರಿಗೆ ಪಕ್ಷದ ಬ್ಲಾಕ್ ಸಮಿತಿ ಮುಖಂಡರ ಪರಿಚಯವೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅಭ್ಯರ್ಥಿ ಯಾರು ಎಂಬುದು ಇನ್ನೂ ನಿರ್ಣಯ ಆಗಲಿಲ್ಲ. ಶೋಭಾ ಅವರು 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶೋಭಾ ಅವರೇ ಅಭ್ಯರ್ಥಿ ಎಂಬುದು ಇದರ ಅರ್ಥವಲ್ಲವೇ’ ಎಂದ ಕಾರ್ಯಕರ್ತರು ‘ಗುಂಪುಗಾರಿಕೆಯಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ನಗರಸಭೆಯ ಅಧ್ಯಕ್ಷ ಸ್ಥಾನವೂ ಕೈತಪ್ಪಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೂ ಗೆದ್ದು ತೋರಿಸುತ್ತೇವೆ. ಕಾರ್ಯಕರ್ತರನ್ನು ಕಡೆಗಣಿಸಿ ಟಿಕೆಟ್ ನೀಡಿದರೆ ಶೋಭಾ ಅವರ ಸೋಲು ಖಚಿತ’ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕರ್ತರನ್ನು ಸಮಾಧಾನಪಡಿಸಲು ಮುಖಂಡರು ನಡೆಸಿದ ಪ್ರಯತ್ನ ಯಶಸ್ವಿಯಾಗಲಿಲ್ಲ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಮುಖಂಡರಾದ ಅನಿಲ್, ಮುತ್ತಯ್ಯ ಮತ್ತಿತರರು ಕಚೇರಿಯಿಂದ ಹೊರ ಬಂದು ಬಾಗಿಲ ಬಳಿ ಧರಣಿ ನಡೆಸಿದರು. ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜಶೆಟ್ಟಿ, ಟಿ.ರಾಜಶೇಖರ್, ಪ್ರೇಮ್‍ಕುಮಾರ್, ರವೀಂದ್ರ ಬೆಳವಾಡಿ, ಸುಧೀರ್, ಚಿಕ್ಕದೇವನೂರು ರವಿ, ಪುಷ್ಪರಾಜ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯಾದಾಗ ಕೇಂದ್ರ ಕೃಷಿ ಖಾತೆ ಸಚಿವೆಯಾಗಿ ಒಮ್ಮೆಯೂ ಭೇಟಿ ಮಾಡಿ ಪರಿಹಾರ ನೀಡಲಿಲ್ಲ. ಪಕ್ಷದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಬಿಜೆಪಿ 28 ಕ್ಷೇತ್ರಗಳಲ್ಲಿ ಗೆಲುತ್ತದೆ ಎಂದು ಭವಿಷ್ಯ ಹೇಳುತ್ತಿದ್ದಾರೆ. ಆದರೆ ಶೋಭಾಗೆ ಈ ಕ್ಷೇತ್ರದ ಟಿಕೆಟ್ ನೀಡಿದಲ್ಲಿ ಸೋಲು ನಿಶ್ಚಿತ.