ಡೈಲಿ ವಾರ್ತೆ: 13/Mar/2024
CAA ಜಾರಿ: ಬಿಜೆಪಿಯ ಚುನಾವಣಾ ಗಿಮಿಕ್ – ಮುಖ್ಯಮಂತ್ರಿ ಸಿದ್ದರಾಮಯ್ಯ!
ಉಡುಪಿ: ಚುನಾವಣೆ ಹತ್ತಿರ ಬರುತ್ತಿರುವಾಗ ಪೌರತ್ವ ತಿದ್ದುಪಡಿ ಕಾಯ್ದೆಯಗಳ ಅಧಿಸೂಚನೆಯನ್ನು ಹೊರಡಿಸಿರುವ ಕೇಂದ್ರ ಬಿಜೆಪಿ ಸರಕಾರ ಸೋಲಿನ ಭೀತಿಯಿಂದ ಈ ರೀತಿಯ ಗಿಮಿಕ್ಸ್ ಗಳನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಪೌರತ್ವ ಕಾಯ್ದೆ ಜಾರಿ ಬಗ್ಗೆ ಮುಖ್ಯಮಂತ್ರಿಗಳ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಇಷ್ಟು ವರ್ಷಗಳ ಕಾಲ ಈ ಬಗ್ಗೆ ಮೌನವಹಿಸಿ, ಚುನಾವಣೆಯ ಹೊಸ್ತಿಲಲ್ಲಿ ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿ ಸಿಎಎ ಜಾರಿ ಬಗ್ಗೆ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಜಯಪ್ರಕಾಶ್ ಹೆಗಡೆಯವರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕರಾವಳಿ ಪ್ರದೇಶದಲ್ಲಿ ಪಕ್ಷಕ್ಕೆ ಬಲ ತುಂಬಿದಂತಾಗಿದೆ ಎಂದರು.
ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆ ಟಿಕೆಟ್ ನೀಡದೇ ಯದುವೀರ್ ಅವರಿಗೆ ಟಿಕೆಟ್ ನೀಡುವ ನಿರ್ಧಾರವನ್ನು ಬಿಜೆಪಿ ಕೈಗೊಂಡಿರುವ ಕಾರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.