ಡೈಲಿ ವಾರ್ತೆ: 26/Mar/2024
ಸರ್ಪಸುತ್ತು ಬಗ್ಗೆ ಆತಂಕ ಬೇಡ: ಇಲ್ಲಿದೆ ಸರಳ ಮನೆ ಮದ್ದುಗಳು
ಬೇಸಿಗೆಯಲ್ಲಿ ಹೆಚ್ಚಿನವರಲ್ಲಿ ಕಾಡುವ ಈ ಸರ್ಪ ಸುತ್ತು ಕಾಯಿಲೆಯು ವೈರಸ್ ನಿಂದ ಉಂಟಾಗುವ ಸೋಂಕಾಗಿದೆ. ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುವಾಗ, ಈ ರೋಗದ ವೈರಾಣು ದೇಹ ಪ್ರವೇಶಿಸಿ ಈ ಕಾಯಿಲೆಗೆ ಕಾರಣವಾಗುತ್ತದೆ. ತ್ವಚೆ ಮೇಲೆ ಕೆಂಪಾಗಿರುವ ಚಿಕ್ಕಚಿಕ್ಕ ನೀರು ಗುಳ್ಳೆಗಳು ಪಟ್ಟೆಯಾಕಾರದಲ್ಲಿ ದೇಹದ ಒಂದು ಪಾರ್ಶ್ವದಲ್ಲಿ ಕಂಡುಬರುತ್ತವೆ. ಈ ಗುಳ್ಳೆಗಳು ನರತಂತುಗಳನ್ನು ಬಾಧಿಸುವುದರಿಂದ ಉರಿ ಹಾಗೂ ತುರಿಕೆಯು ವಿಪರೀತವಾಗಿರುತ್ತದೆ. ಹಳ್ಳಿ ಮದ್ದಿನಿಂದ ಈ ಕಾಯಿಲೆಯನ್ನು ಗುಣ ಪಡಿಸಿಕೊಳ್ಳಬಹುದು.
➤ ಹಳೆ ಅಕ್ಕಿ ಗಂಜಿ, ಬೇಯಿಸಿದ ಹೆಸರು ನೀರು, ಕೊತ್ತಂಬರಿಯ ನೀರು, ಎಳನೀರು ಸೇವಿಸುವುದು ದೇಹವನ್ನು ತಂಪಾಗಿಸುತ್ತದೆ.
➤ ಗರಿಕೆ ಹುಲ್ಲನ್ನು ಬೇರು ಸಮೇತ ಕಿತ್ತು ಚೆನ್ನಾಗಿ ನೀರಿನಲ್ಲಿ ತೊಳೆದು ಪೇಸ್ಟ್ ಮಾಡಿ ಸರ್ಪ ಸುತ್ತು ಆದ ಜಾಗಕ್ಕೆಲ್ಲಾ ಹಚ್ಚುವುದರಿಂದ ಗಾಯವು ಒಣಗುತ್ತವೆ.
➤ ಗೋಟು ಅಡಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ದಿನಕ್ಕೆ ನಾಲ್ಕು ಬಾರಿ ಗುಳ್ಳೆಗಳಿಗೆ ಲೇಪಿಸುವುದರಿಂದ ಗುಣಮುಖ ಕಾಣುತ್ತದೆ.
➤ ಬೇವಿನ ಎಲೆಯ ರಸವನ್ನು ಮೈಗೆಲ್ಲಾ ಹಚ್ಚುವುದರಿಂದ ಉರಿ ಹಾಗೂ ನವೆಯು ಕಡಿಮೆಯಾಗುತ್ತದೆ.
➤ ಕೆಂಪು ಅಥವಾ ಬಿಳಿ ಅಗಸೆ ಸೊಪ್ಪನ್ನು ತಣ್ಣೀರಿನಲ್ಲಿ ನುಣ್ಣಗೆ ಅರೆದು ಹಚ್ಚುವುದು ಪರಿಣಾಮಕಾರಿಯಾಗಿದೆ.
➤ ನೆಲ್ಲಿ ಪುಡಿ, ಲಾವಂಚ, ಸೊಗದೆ ಬೇರು ಈ ಮೂರನ್ನು ಹತ್ತರಿಂದ ಹದಿನೈದು ಗ್ರಾಂನಷ್ಟು ತೆಗೆದುಕೊಂಡು ಬೇರೆ ಬೇರೆಯಾಗಿ ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ನೀರು ಬೇರೆಸಿ ಕುದಿಸಿ ದಿನಕ್ಕೆ ಎರಡು ಬಾರಿ ಎರಡು ಚಮಚದಷ್ಟು ಸೇವಿಸುವುದರಿಂದ ಬೇಗನೇ ಸರ್ಪಸುತ್ತು ನಿವಾರಣೆಯಾಗುತ್ತದೆ.
➤ ಅಗಸೆ ಸೊಪ್ಪನ್ನು ಅರೆದು ಲೇಪಿಸುವುದರಿಂದ ಮೈ ಮೇಲಿರುವ ಗಾಯವು ಮಾಗುತ್ತದೆ.
➤ ಶ್ರೀಗಂಧವನ್ನು ಅರೆದು ಸರ್ಪಸುತ್ತು ಇರುವಲ್ಲಿ ಹಚ್ಚುತ್ತಿದ್ದರೆ ಬೇಗನೇ ಗುಣ ಮುಖವಾಗುತ್ತದೆ.