ಡೈಲಿ ವಾರ್ತೆ: 26/Mar/2024

ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ!

ಬೀದರ್: ವಾರ್ಷಿಕ ಪರೀಕ್ಷೆಯ ಪ್ರವೇಶ ಪತ್ರ (ಹಾಲ್ ಟಿಕೆಟ್) ಕುರಿ ತಿಂದ ಕಾರಣ ಮನನೊಂದ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಗ್ರಾಮದ ನಿವಾಸಿ ಪೂಜಾ ಮಾರುತಿ ಮೇತ್ರೆ (14) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ.
ಗ್ರಾಮದ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿಯ ಪ್ರವೇಶ ಪತ್ರವನ್ನು ಸೋಮವಾರ ರಾತ್ರಿ ಕುರಿ ತಿಂದು ಹಾಕಿತು. ಇದರಿಂದ ಆತಂಕಗೊಂಡು ಈಕೆ ಶಾಲೆಯ ಮುಖ್ಯ ಗುರುಗಳ ಹೆಸರಿನಲ್ಲಿ ಒಂದು ಪತ್ರ ಬರೆದಿದ್ದು, ʼನನ್ನ ಪರೀಕ್ಷೆ ಪ್ರವೇಶ ಪತ್ರ ಕಳೆದ ಕಾರಣ ನನಗೆ ಶಾಲೆಗೆ ಬರಲು ಆಗಲ್ಲ. ನಾನು ಸತ್ತು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಬಿಡಿʼ ಎಂದು ವಿವರಿಸಿದ್ದಾಳೆ.

ಅಣ್ಣನ ಕೈಗೆ ಪತ್ರವನ್ನು‌ ಕೊಟ್ಟು ಸಂಜೆ 7 ಗಂಟೆ ಸುಮಾರಿಗೆ ಮನೆಯಿಂದ ನಾಪತ್ತೆಯಾಗಿದ್ದು ಬಳಿಕ ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ. ರಾತ್ರಿ 11.30ರ ಸುಮಾರಿಗೆ ಈಕೆ ತನ್ನ ಸಂಬಂಧಿಕರ ಜಮೀನಿನಲ್ಲಿಯ ಬಾವಿಯಲ್ಲಿ ಅಳುತ್ತ ಕುಳಿತಿರುವುದು ಕೇಳಿ ಬಳಿಕ ಆಕೆಯನ್ನು ರಕ್ಷಣೆ ಮಾಡಿ ಬಾವಿಯಿಂದ ಮೇಲೆ ತರಲಾಯಿತು.
ಸುಮಾರು 30 ಅಡಿಗಳಷ್ಟು ಆಳವಾಗಿರುವ ಬಾವಿಯಲ್ಲಿ ನೀರು ಕಡಿಮೆ ಇರುವ ಕಾರಣ ಜೀವಕ್ಕೆ ತೊಂದರೆಯಾಗಿಲ್ಲ. ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಂಗಳವಾರ ಎಂದಿನಂತೆ ಪರೀಕ್ಷೆಗೆ ಹಾಜರಾಗಿದ್ದಾಳೆ.