ಡೈಲಿ ವಾರ್ತೆ: 30/April/2024

ಕಣ್ಣೂರು: ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ-ಒಂದೇ ಕುಟುಂಬದ ಐವರು ದುರ್ಮರಣ!

ಕಣ್ಣೂರು: ಕಾರು ಹಾಗೂ ಲಾರಿ ನಡುವೆ ನಡೆದ  ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ಕಣ್ಣೂರು ಜಿಲ್ಲೆಯ ಚೆರುಕುನ್ನು ಸಮೀಪದ ಪುನ್ನಚೇರಿ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಪುರುಷರು, ಓರ್ವ ಮಹಿಳೆ ಹಾಗೂ 9 ವರ್ಷದ ಬಾಲಕ ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುತ್ತಾರೆ.
ಮೃತರು ಕಾರು ಚಲಾಯಿಸುತ್ತಿದ್ದ ಕಾಸರಗೋಡು ಕಾಳೀಚನಡುಕ್ಕಂನ ಸಾಸ್ತಂಪಾರದ ಕೆ.ಎನ್.ಪದ್ಮಕುಮಾರ್ (59), ಭೀಮಾನಡಿಯ ಚೂರಿಕಟ್ಟೆಯ ಸುಧಾಕರನ್ (52), ಸುಧಾಕರನ್ ಅವರ ಪತ್ನಿ ಅಜತಾ (35), ಅವರ ತಂದೆ ಕೊಜುಮ್ಮಲ್ ಕೃಷ್ಣನ್ (65) ಮತ್ತು ಅಜಿತಾ ಅವರ ಸಹೋದರ ಅಜಿತ್ ಅವರ ಮಗ ಆಕಾಶ್ (9) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಬಾಲಕ ಆಕಾಶ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮಂಗಳೂರಿನಿಂದ ಬರುತ್ತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿಯು ಹಿಂಬದಿಯಿಂದ ಬಂದ ಕಾರಿಗೆ ಢಿಕ್ಕಿ ಹೊಡೆದಿದ್ದರಿಂದ ಕಾರು ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಲಾರಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಸುಧಾಕರನ್ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಮಗ ಸೌರವ್‌ನನ್ನು ಕೋಝಿಕ್ಕೋಡ್ನಲ್ಲಿರುವ ಶಿಕ್ಷಣ ಸಂಸ್ಥೆಗೆ ಸೇರಿಸಿದ ನಂತರ ಕಾಸರಗೋಡಿಗೆ ಹಿಂತಿರುಗುತ್ತಿದ್ದರು.

ಕಾರಿನೊಳಗೆ ಸಿಲುಕಿದ್ದವರನ್ನು ಕಾರಿನ ಗಾಜು ಒಡೆದು ಸ್ಥಳೀಯರು ಹೊರಗೆ ತೆಗೆಯಲು ಯತ್ನಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಘಾತ ಮಾಡಿದ ಲಾರಿಗಳ ಇಬ್ಬರು ಚಾಲಕರನ್ನು ಕನ್ನಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.