ಡೈಲಿ ವಾರ್ತೆ: 01/ಮೇ /2024
ರಾಯಚೂರು: ಕಾಲುವೆಗೆ ಬಿದ್ದು ಯುವಕರಿಬ್ಬರು ಮೃತ್ಯು!
ರಾಯಚೂರು: ಊರ ಜಾತ್ರೆ ನಿಮಿತ್ತ ಮನೆಯಲ್ಲಿನ ಬಟ್ಟೆ ಹಾಸಿಗೆ ತೊಳೆಯಲು ಪಾಲಕರೊಂದಿಗೆ ಕಾಲುವೆಗೆ ಹೋದಾಗ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಲಿಂಗಸುಗೂರು ನಡೆದಿದೆ.
ಮೃತ ಯುವಕರು ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದ ಲಕ್ಕಣ್ಣ (22) ಹಾಗೂ ಬಸವಂತ (25) ಎಂದು ಗುರುತಿಸಲಾಗಿದೆ.
ಬಟ್ಟೆ ತೊಳೆಯೋವಾಗ ಮೊದಲು ಓರ್ವ ಯುವಕ ಕಾಲು ಜಾರಿ ನೀರಿಗೆ ಬಿದ್ದಿದ್ದ. ಅವನನ್ನು ಕಾಪಾಡಲು ಮತ್ತೋರ್ವ ಯುವಕ ನೀರಿಗೆ ಧುಮುಕಿದ್ದ. ಆದರೆ ಇಬ್ಬರಿಗೂ ಈಜು ಬಾರದ ಹಿನ್ನೆಲೆ ಕಾಲುವೆಯಲ್ಲಿ ಸಾವನ್ನಪ್ಪಿದ್ದಾರೆ.
ಸ್ಥಳೀಯರು ಪ್ರಯತ್ನ ಪಟ್ಟರೂ ಯಶಸ್ವಿಯಾಗಿಲ್ಲ. ಬಳಿಕ ಯುವಕರ ಶವಗಳನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ