ಡೈಲಿ ವಾರ್ತೆ: 19/ಮೇ /2024
ಸ್ಥಳೀಯರಿಗೆ ಟೋಲ್ ಬರೆ – ಸಾಸ್ತಾನ ಟೋಲ್ ಗೇಟ್ ಮುಂಭಾಗ ಪ್ರತಿಭಟನೆ ಮಾಡಿದ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್
ಕೋಟ: ಹಲವು ವರ್ಷದಿಂದ ನವಯುಗ ಕಂಪನಿಯು ಸಾಸ್ತಾನ ಟೋಲ್ ನಲ್ಲಿ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ವಾಹನಗಳಿಗೆ ಟೋಲ್ ವಿನಾಯತಿ ನೀಡಿದ್ದು. ಇತ್ತೀಚಿಗೆ ಟೋಲ್ ಬೇರೆ ಕಂಪನಿ ನಡೆಸುತ್ತಿರುವುದರಿಂದ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ರದ್ದು ಪಡಿಸಿ ಯಾವುದೇ ಮಾಹಿತಿಯನ್ನು ಸ್ಥಳೀಯರಿಗೆ ನೀಡದೆ ಸ್ಥಳೀಯ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸುತ್ತಿವುದು ಬೆಳಕಿಗೆ ಬಂದಿದೆ.
ರೊಚ್ಚಿಗೆದ್ದ ಸ್ಥಳೀಯರು:
ಮೇ. 18 ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ರವರ ಬ್ಯಾಂಕ್ ಖಾತೆಯಿಂದ ಎರಡು ಬಾರಿ ಹಣ ಕಡಿತಗೊಂಡಿರುತ್ತದೆ. ಇದನ್ನು ಅರಿತ ನಾಗೇಂದ್ರ ಪುತ್ರನ್ ಅವರು ತನಗಾದ ಅನ್ಯಾಯದ ವಿರುದ್ಧ ಟೋಲ್ ನಲ್ಲಿ ಸುಮಾರು ಒಂದು ಗಂಟೆ ಕಾಲಾ ಪ್ರತಿಭಟನೆ ಮಾಡಿದರು.
ಅಷ್ಟರಲ್ಲಿ ಹಲವಾರು ಮಂದಿ ಸ್ಥಳೀಯರು ಟೋಲ್ ಯಿಂದ ತಮಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಹೋರಾಟಕ್ಕೆ ಸಾಥ್ ನೀಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಾಗೇಂದ್ರ ಪುತ್ರನ್ ಅವರು ನಮ್ಮ ಹೋರಾಟ ಕೇಂದ್ರ ನಾಯಕರ ವಿರುದ್ಧ ಹಾಗೂ ಅಕ್ರಮ ಟೋಲ್ ವಿರುದ್ಧವಾಗಿದ್ದು ಕೇಂದ್ರ ಹೆದ್ದಾರಿ ಸಚಿವರು ದಿನಕ್ಕೆ ಒಂದು ಹೇಳಿಕೆ ನೀಡುತ್ತಾ ಇದ್ದು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡುತ್ತಾ ಇದ್ದಾರೆ. ಇಡೀ ದೇಶದಲ್ಲಿ ಟೋಲ್ ಶುಲ್ಕ ರದ್ದು ಮಾಡುತ್ತೇವೆ ಎಂದು ಇಲ್ಲಿ 45 ಕಿ.ಮೀ ಗೆ ಒಂದೊಂದು ಟೋಲ್ ಮಾಡಿಕೊಂಡು ಅಮಾಯಕ ಸಾರ್ವಜನಿಕರಿಂದ ವಸೂಲಿ ಮಾಡಿ ಸುಲಿಗೆ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಮಾಧ್ಯಮಕ್ಕೆ ತಿಳಿಸಿದರು.
ಅಲ್ಲದೆ ಮುಂದಿನ ದಿನಗಳಲ್ಲಿ ಇದೇ ರೀತಿ ಆದರೆ ಸಾರ್ವಜನಿಕರಿಗೆ ಆಗುವ ಅನ್ಯಾಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಈ ಭಾಗದಲ್ಲಿ ಹೋರಾಟ ಮಾಡುವುದು ಶತಸಿದ್ದ ಎನ್ನುವಂತಹ ವಿಚಾರವನ್ನು ಇವರು ತಿಳಿಸಿದರು. ಪ್ರತಿಭಟನೆ ಕಾವು ಹೆಚ್ಚುತ್ತಿದ್ದಂತೆ ಕೋಟ ಠಾಣಾಧಿಕಾರಿ ತೇಜಸ್ವಿ ಹಾಗೂ ಎಸ್ ಐ ಸುಧಾ ಪ್ರಭು ಇವರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ವಹಿಸಿದರು. ಸ್ಥಳಕ್ಕಾಗಮಿಸಿದ ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ ಅವರು ಪ್ರತಿಭಟನಾಕಾರರ ಮನವೊಲಿಸಿ ಸೋಮವಾರ ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವ ಬಗ್ಗೆ ತಿಳಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ ಕಾರಣ ಪ್ರತಿಭಟನೆ ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರಾದ ಗೋಪಾಲಕೃಷ್ಣ ಕುಂಭಾಶಿ ವಸಂತ ಸುವರ್ಣ, ಜಗನ್ನಾಥ ಅಮೀನ್, ಸಚಿನ್ ಪಾಂಡೇಶ್ವರ, ಪ್ರವೀಣ್ ಹರ್ತಟ್ಟು, ಜೀವನ್ ಕದ್ರಿಕಟ್ಟು ಇವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.