ಡೈಲಿ ವಾರ್ತೆ: 18/ಸೆ./2025

ಧರ್ಮಸ್ಥಳ ಪ್ರಕರಣಕ್ಕೆ ರೋಚಕ ತಿರುವು: ಅಸ್ಥಿಪಂಜರದ ಬಳಿ ಸಿಕ್ಕ ಐಡಿ ಕಾರ್ಡ್​​ ವ್ಯಕ್ತಿ ರಹಸ್ಯ ಬಯಲಿಗೆ

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರ, ತಲೆ ಬುರುಡೆ ಹಾಗೂ ಮೂಳೆಗಳ ಯಾರದ್ದು ಎಂಬ ಪ್ರಶ್ನೆ ಮೂಡಿದೆ. ಹೀಗಿರುವಾಗಲೇ ಧರ್ಮಸ್ಥಳದ ಬಂಗ್ಲೆಗುಡ್ಡೆದಲ್ಲಿ ಶೋಧಕ್ಕೆ ರೋಚಕ ತಿರುವು ಸಿಕ್ಕಿದೆ.

ಬುರುಡೆ ಮತ್ತು ಅಸ್ಥಿಪಂಜರದ ಬಳಿ ಒಂದು ಐಡಿ ಕಾರ್ಡ್​ ಸಿಕ್ಕಿದ್ದು, ಅದು ಯು.ಬಿ.ಅಯ್ಯಪ್ಪ ಎಂಬುವರ ಐಟಿ ಕಾರ್ಡ್ ಎನ್ನುವುದು ಸಹ ಪತ್ತೆಯಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ನಿವಾಸಿ ಅಯ್ಯಪ್ಪ ಎನ್ನುವರು 2017ರಲ್ಲಿ ಕಾಣೆಯಾಗಿದ್ದರು. ಇದೀಗ ಅವರ ಐಡಿ ಕಾರ್ಡ್ ಬಂಗ್ಲೆಗುಡ್ಡದಲ್ಲಿ ಸಿಕ್ಕಿದೆ.

ಐಡಿ ಕಾರ್ಡ್ ರಹಸ್ಯ ಬಯಲು:
ಇನ್ನು ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ತಲೆ ಬುರುಡೆ ಮತ್ತು ಅಸ್ಥಿಪಂಜರದ ಬಳಿ ಪತ್ತೆಯಾದ ಐಡಿ ಕಾರ್ಡ್​ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗ್ರಾಮದ ನಿವಾಸಿ ಅಯ್ಯಪ್ಪ ಅವರದ್ದು ಎನ್ನುವುದು ತಿಳಿದುಬಂದಿದೆ. 2017ರಲ್ಲಿ ಮೈಸೂರಿನ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಹೋಗಿದ್ದ ಅಯ್ಯಪ್ಪ, ಅಂದಿನಿಂದ ಕಾಣೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು, ಕುಟ್ಟ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದರು. ಹೀಗಾಗಿ ಸಿಕ್ಕ ಅಸ್ಥಿಪಂಜರ ಸಹ ಅಯ್ಯಪ್ಪನವರದ್ದೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಅಯ್ಯಪ್ಪ ಕಾಣೆಯಾಗಿರುವ ಬಗ್ಗೆ ಅವರ ಪುತ್ರ ಜೀವನ್ ಎನ್ನುವರು ನೀಡಿದ ದೂರಿನ ಬಗ್ಗೆ 15-06-2017ರಂದು ಕುಟ್ಟ ಠಾಣೆ ಎಫ್ಐಆರ್ ದಾಖಲಾಗಿತ್ತು. ಆಸ್ಪತ್ರೆಗೆಂದು ಬೆಳಗ್ಗೆ 6 ಗಂಟೆಗೆ ಮನೆ ಬಿಟ್ಟಿದ್ದ ಅಯ್ಯಪ್ಪ, ಬೆಳಗ್ಗೆ 11.30ರ ನಂತರ ಅವರ ಮೊಬೈಲ್ ಸ್ವಿಚ್ ಅಫ್ ಆಗಿತ್ತು. ಇದಾದ ಬಳಿಕ ಕುಟುಂಬ ಒಂದು ವಾರ ಹುಡುಕಾಡಿತ್ತು. ಕೊನೆಗೆ ಅಯ್ಯಪ್ಪ ಸುಳಿವು ಸಿಗದಿದ್ದಾಗ ಜೀವನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದ್ರೆ, ದೂರು ನೀಡಿದರೂ ಸಹ ಅಯ್ಯಪ್ಪ ಸುಳಿವು ಸಹ ಸಿಕ್ಕಿರಲಿಲ್ಲ. ಇದೀಗ ಎಂಟು ವರ್ಷಗಳ ಬಳಿಕ ಬಂಗ್ಲೆಗುಡ್ಡೆಯಲ್ಲಿ ಅಯ್ಯಪ್ಪ ಅವರ ಐಡಿ ಕಾರ್ಡ್ ಪತ್ತೆಯಾಗಿದೆ.

ಇನ್ನೂ ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ಅಸ್ಥಿಪಂಜರಗಳು ಆತ್ಮಹತ್ಯೆಯ ಸ್ಥಿತಿಯಲ್ಲಿತ್ತು ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ತಲೆ ಬುರುಡೆ ಹಾಗು ಅವಶೇಷಗಳು ಹಗ್ಗ, ಬಟ್ಟೆಯಿಂದ ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಅಂತಾ ಎಸ್ಐಟಿ ಮೂಲಗಳು ತಿಳಿಸಿವೆ. ಇಷ್ಟೇ ಅಲ್ಲ, ಶೋಧದ ವೇಳೆ ಎಸ್ಐಟಿ ಅಧಿಕಾರಿಗಳಿಗೆ ಹಲವು ವಸ್ತುಗಳು ಸಿಕ್ಕಿವೆ. ಒಂದು ಅಸ್ಥಿಪಂಜರದ ಪಕ್ಕದಲ್ಲೇ ಹಿರಿಯ ನಾಗರಿಕರ ಕಾರ್ಡ್ ಪತ್ತೆಯಾಗಿದೆ. ಎಸ್ಐಟಿ ಶೋಧದ ವೇಳೆ ಮರದಲ್ಲಿ ಎರಡು ಹಗ್ಗ ಮತ್ತು ಒಂದು ಸೀರೆ ಸಿಕ್ಕಿದೆ. ಹಗ್ಗದ ಪತ್ತೆಯಾದ ಮರದ ಕೆಳ ಭಾಗದಲ್ಲೇ ಅಸ್ಥಿಪಂಜರ ಸಿಕ್ಕಿದೆ. ನೇಣು ಹಾಕಿಕೊಂಡ ಕುಣಿಕೆ ರೀತಿ ಪತ್ತೆಯಾದ ಹಗ್ಗ ಮತ್ತು ಸೀರೆಯನ್ನೂ ವಶಕ್ಕೆ ಪಡೆಯಲಾಗಿದ್ದು, ಎಲ್ಲವನ್ನೂ ಸೀಲ್ ಮಾಡಲಾಗಿದೆ. ಇನ್ನು ಸಿಕ್ಕ ಆ ಐಡಿ ಕಾರ್ಡ್​ ಯಾರದ್ದು ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ವಿಠ್ಠಲಗೌಡ ಹೇಳಿಕೆ ಆಧರಿಸಿ ಬಂಗ್ಲೆಗುಡ್ಡದಲ್ಲಿ ಶೋಧ ನಡೆಸಿದಾಗ ನಿನ್ನೆ 5 ಬುರುಡೆ ಮತ್ತು ಮೂಳೆಗಳು ಪತ್ತೆಯಾಗಿತ್ತು. ಆದ್ರೆ, ಬಂಗ್ಲೆಗುಡ್ಡದಲ್ಲಿ ಅಗೆದಿಲ್ಲ. ಭೂಮಿಯೇ ಮೇಲ್ಮಾಗದಲ್ಲೇ ಅಸ್ಥಿಪಂಜರ ಸಿಕ್ಕಿತ್ತು. ಹೀಗಾಗಿ ಬುರುಡೆ ಮತ್ತು ಮೂಳೆ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಿದ SIT ಅಧಿಕಾರಿಗಳು FSLಗೆ ಕಳುಹಿಸಿದ್ದಾರೆ. ಮೇಲ್ನೋಟಕ್ಕೆ ಬುರುಡೆ ಮತ್ತು ಮೂಳೆಯನ್ನ ಪರಿಶೀಲಿಸಿದಾಗ ಇದು ಪುರುಷರದ್ದು ಅಂತಾ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಮೂಳೆಗಳ ಸಂಪೂರ್ಣ ವಿಶ್ಲೇಷಣೆಗಾಗಿ FSLಗೆ ಕಳುಹಿಸಲಾಗಿದೆ.