ಡೈಲಿ ವಾರ್ತೆ: 18/ಸೆ./2025

ಅಂಕೋಲಾ| ಸಾರಿಗೆ ಬಸ್ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಮೃತ್ಯು, ಹಲವರಿಗೆ ಗಾಯ

ವರದಿ : ವಿದ್ಯಾಧರ ಮೊರಬಾ
ಅಂಕೋಲಾ: ಟ್ಯಾಂಕರ್ ಲಾರಿ ಮತ್ತು ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ಯಾಂಕರ್ ಚಾಲಕ ಮತ್ತು ಒರ್ವ ಬಸ್ ಪ್ರಯಾಣಿಕ ಸೇರಿ ಒಟ್ಟು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಸುಮಾರು 9 ಜನರು ಗಾಯಗೊಂಡ ಘಟನೆ ಸೆ. 18 ರಂದು ಗುರುವಾರ ತಾಲೂಕಿನ ಅಡ್ಲೂರ್ ಬಳಿ ಸಂಭವಿಸಿದೆ.

ಮಕ್ಕಿಗದ್ದೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಸಾಗುತ್ತಿದ್ದ ಟ್ಯಾಂಕರ್ ಲಾರಿ ನಡುವೆ ಅಡ್ಲೂರಿನ ತರಂಗ ಹೊಟೇಲ್ ಎದುರು ಭೀಕರ ಅಪಘಾತ ಸಂಭವಿಸಿದ್ದು ಟ್ಯಾಂಕರ್ ಚಾಲಕ ಮುದ್ದೇಬಿಹಾಳ ನಿವಾಸಿ ಶರಣಪ್ಪ ಎಸ್ (30) ಮತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ತಾಲೂಕಿನ ಕೇಣಿಯ ಭಾಸ್ಕರ ಗಾಂವಕರ್(50) ಎನ್ನುವವರು ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು.

ಬಸ್ ಚಾಲಕ ಅವರ್ಸಾ ದಂಡೇಭಾಗ ನಿವಾಸಿ ರತ್ನಾಕರ ನಾಯ್ಕ ಕಾಲಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರಕ್ಕೆ ಸಾಗಿಸಲಾಗಿದೆ. 9 ಜನ ಪ್ರಯಾಣಿಕರಿಗೆ ಗಂಭೀರ ಗಾಯ ಗೊಂಡಿದ್ದು ಗಾಯಾಳು
ಗಳನ್ನು ಅಂಬುಲೆನ್ಸ್ ಮೂಲಕ ತಾಲೂಕ ಆಸ್ಪತ್ರೆಗೆ ಸಾಗಿಸಿ, ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಕಾರವಾರಕ್ಕೆ ಸಾಗಿಸಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಬೇಟಿ ನೀಡಿದರು. ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ್ ಮಠಪತಿ, ಪಿಎಸ್ಐಗಳಾದ ಗುರುನಾಥ್ ಹಾದಿಮನಿ, ಸುನಿಲ್ ಹುಲ್ಲೊಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.

ಮಕ್ಕಿಗದ್ದೆ ಶಾಲಾ ಶಿಕ್ಷಕಿ ವೀಣಾ ವೆಂಕಟರಮಣ, ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಾದ ಪ್ರಜ್ಞಾ ಪ್ರದೀಪ ನಾಯ್ಕ ಅಲಗೇರಿ, ಪ್ರಜ್ಞಾ ಮಗಳು ಸಾನ್ವಿ, ಸಾವಿತ್ರಿ ದಾಾಕು ಗೌಡ ಒಕ್ಕಲ ಬೆಳಸೆ ,ರಕ್ಷಾ ರಾಘವೇಂದ್ರ ಬಾನಾವಳಿ ಅವರ್ಸಾ,ಬಸ್ಸಿನ ನಿರ್ವಾಹಕ ಚಂದ್ರಹಾಸ ನಾರಾಯಣ ನಾಯಕ ಕೋಡ್ಕಣಿ, ಶ್ರೀಧರ ಈಶ್ವರ ಹರಿಕಂತ್ರ ಬಳಲೆ, ರಾಧಾಕೃಷ್ಣ ಮಹಾಬಲೇಶ್ವರ ನಾಯ್ಕ ಮಕ್ಕಿಗದ್ದೆ ಗಾಯಗೊಂಡಿದ್ದಾರೆ.