ಡೈಲಿ ವಾರ್ತೆ: 17/ಜುಲೈ /2024
ದೇವಸ್ಥಾನದಲ್ಲಿ ಕಾಲುಜಾರಿ ಬಿದ್ದ ಮಾಜಿ ಸಚಿವ ಹೆಚ್ಡಿ ರೇವಣ್ಣ: ಪಕ್ಕೆಲುಬಿಗೆ ಪೆಟ್ಟು, ಐಸಿಯುನಲ್ಲಿ ಚಿಕಿತ್ಸೆ
ಹಾಸನ: ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದು ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಗೆ ಪಕ್ಕೆಲುಬಿಗೆ ಪೆಟ್ಟಾಗಿರುವಂತಹ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ದೇವೇಶ್ವರ ದೇವಾಲಯದಲ್ಲಿ ನಡೆದಿದೆ.
ಸದ್ಯ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಕಾದಶಿ ಪ್ರಯುಕ್ತ ಉಪವಾಸವಿದ್ದು, ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪೂಜೆ ಸಲ್ಲಿಸಿ ಬರುವಾಗ ಜಾರಿ ಬಿದಿದ್ದು, ಪಕ್ಕೆಲುಬುಗೆ ಪೆಟ್ಟಾಗಿದೆ.
ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರ ಕುಟುಂಬಕ್ಕೆ ಸಂಕಷ್ಟಗಳು ಎದುರಾಗುತ್ತಿವೆ. ಹೀಗಾಗಿ ಅವರು ಇತ್ತೀಚೆಗೆ ಒಂದಾದ ಮೇಲೆ ಒಂದರಂತೆ ದೇವಸ್ಥಾನಗಳಿಗೆ ಮೊರೆ ಹೋಗಿದ್ದರು. ಆ ಮೂಲಕ ದೇವರೇ ತಮ್ಮ ಕುಟುಂಬಕ್ಕೆ ಎದುರಾದ ಕಾನೂನು ಸಂಕಷ್ಟಗಳಿಂದ ಪಾರು ಮಾಡು ಅಂತ ಪ್ರಾರ್ಥಿಸಿದ್ದರು.