ಡೈಲಿ ವಾರ್ತೆ: 28/ಜುಲೈ /2024

ಬೇಳೂರು ಗ್ರಾ. ಪಂ. ನಲ್ಲಿ ದ್ವೇಷ ರಾಜಕಾರಣ: ಹೈಕೋರ್ಟ್ ಆದೇಶಕ್ಕೆ ಬೆಲೆ ಇಲ್ಲ – ಅಧ್ಯಕ್ಷನಿಗೂ ಸಾಮಾನ್ಯನಿಗೂ ಒಂದೇ ಕಾನೂನು ಆಗಬೇಕು – ನ್ಯಾಯವಾದಿ ಬೇಳೂರು ಅವಿನಾಶ್ ಶೆಟ್ಟಿ

ಕುಂದಾಪುರ: 1980ನೇ ಇಸವಿಯಲ್ಲಿ ಬೇಳೂರು ಗ್ರಾಮದಲ್ಲಿ ರಸ್ತೆ ಸಂಪರ್ಕ ಇಲ್ಲದಿರುವ ಸಂದರ್ಭದಲ್ಲಿ ಉಚಿತವಾಗಿ ಗ್ರಾಮಸ್ಥರಿಗೆ ರಸ್ತೆಗಾಗಿ ಚಂದು ಮಡಿವಾಳ ಮತ್ತು ಅವರ ಕುಟುಂಬದ ಹಿರಿಯರು ಜಾಗ ನೀಡಿದ್ದರು.
2017 ನೇ ಇಸವಿಯಲ್ಲಿ ಬೇಳೂರು ಗ್ರಾಮದ ಬಡಾಬೆಟ್ಟು ಎಂಬಲ್ಲಿ ಚಂದು ಮಡಿವಾಳ್ತಿ ಇವರು ತನ್ನ ಮಗನಾದ ರವಿರಾಜ ಮಡಿವಾಳ ಇವರಿಗೆ ಟೈಲರಿಂಗ್ ಅಂಗಡಿ ಮಾಡಲು ವಾಣಿಜ್ಯ ಕಟ್ಟಡವನ್ನು ನಿರ್ಮಿಸಲು ತಹಶೀಲ್ದಾರ್ ಇವರಿಂದ ವಾಣಿಜ್ಯ ಭೂ ಪರಿವರ್ತನೆ ಮಾಡಿ ಬೇಳೂರು ಗ್ರಾಮ ಪಂಚಾಯತ್ ಇವರಿಗೆ ಕಟ್ಟಡ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ್ದರು.

ಗ್ರಾಮ ಪಂಚಾಯತ ಪ್ರಥಮವಾಗಿ ಕಟ್ಟಡ ಲೈಸೆನ್ಸ್ ನೀಡಿದ್ದರು. ಕಟ್ಟಡದ ರಚನೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನಿರಕ್ಷೇಪಣಾ ಪತ್ರ ನೀಡಿದ್ದರು. ಕಟ್ಟಡ ಪೂರ್ಣಗೊಂಡ ಬಳಿಕ ಚಂದು ಮಡಿವಾಳತಿ ಗ್ರಾಮ ಪಂಚಾಯಿತಿಗೆ ಹೋಗಿ ಶಾಶ್ವತ ಡೋರ್ ನಂಬರ್ ಶಾಶ್ವತ ನಿರಕ್ಷೇಪಣಾ ಪತ್ರ ಕೇಳಿದಾಗ ರಸ್ತೆ ಮಾರ್ಜಿನ್ ತಗಾದೆ ತೆಗೆದು ಡೋರ್ ನಂಬರ್ ಹಾಗೂ ವಿದ್ಯುತ್ ನಿರಕ್ಷೇಪಣಾ ಪತ್ರ ನೀಡಲಾಗುವುದಿಲ್ಲ ಎಂದು ಹಿಂಬರಹ ನೀಡಿದರು . ಗ್ರಾಮ ಪಂಚಾಯತ್ ನವರು ನೀಡಿದ ಹಿಂಬರಹದ ವಿರುದ್ಧವಾಗಿ ಚಂದು ಮಡಿವಾಳತಿ ಇವರು ತಾಲೂಕು ಪಂಚಾಯಿತಿ ನ್ಯಾಯಾಲಯಕ್ಕೆ ನ್ಯಾಯವಾದಿ ಬೇಳೂರು ಅವಿನಾಶ್ ಶೆಟ್ಟಿ ಅವರ ಮುಖಾಂತರ ವಕಾಲತ್ತು ಹಾಕಿಸಿ ನ್ಯಾಯಾಲಯದ ಮೆಟ್ಟಿಲೇರಿದರು. ಚಂದು ಮಡಿವಾಳತಿ ಇವರ ಪರವಾಗಿ ಶಾಶ್ವತ ವಿದ್ಯುತ್ ಸಂಪರ್ಕವನ್ನು ವಾಣಿಜ್ಯ ಕಟ್ಟಡಕ್ಕೆ ತಾಲೂಕು ಪಂಚಾಯಿತಿ ನ್ಯಾಯಾಲಯದಲ್ಲಿ ಆದೇಶ ವಾಗುತ್ತದೆ. ಇದರಿಂದಾಗಿ ಅಧ್ಯಕ್ಷರಾದ ಬಿ.ಕರುಣಾಕರ ಶೆಟ್ಟಿ ಇವರಿಗೆ ಅವಮಾನವಾಗುತ್ತದೆ. ತಾಲೂಕು ಪಂಚಾಯಿತಿ ನ್ಯಾಯಾಲಯದ ಆದೇಶದ ಪ್ರಕಾರವಾಗಿ ವಿದ್ಯುತ್ ಸಂಪರ್ಕದ ನಿರಕ್ಷೇಪಣಾ ಪತ್ರವನ್ನು ಈಗಾಗಲೇ ನೀಡಲಾಗಿದೆ ಎಂಬ ಸುಳ್ಳು ಹಿಂಬರಹ ಪತ್ರವನ್ನು ತಯಾರಿಸಿ ಚಂದು ಮಡಿವಾಳ ಇವರ ವಾಣಿಜ್ಯ ಕಟ್ಟಡಕ್ಕೆ ಶಾಶ್ವತ ವಿದ್ಯುತ್ ಸಂಪರ್ಕವನ್ನು ನೀಡದೆ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಚಂದು ಮಡಿವಾಳ ಇವರ ವಾಣಿಜ್ಯ ಕಟ್ಟಡವು ರಸ್ತೆ ಮಾರ್ಜಿನಲ್ಲಿ ಇರುವ ಕಾರಣ ಕಟ್ಟಡವನ್ನು ಒಡೆದು ನೆಲಸಮ ಮಾಡುವಂತೆ ಗ್ರಾಮ ಪಂಚಾಯತ್ ಖಾತೆಯಿಂದ ಪಂಚಾಯತ ಅಭಿವೃದ್ಧಿ ಅಧಿಕಾರಿ ಇವರು 25000 ಹಣವನ್ನು ಡ್ರಾ ಮಾಡಿ ಮೇಲ್ಮನವಿ ಸಲ್ಲಿಸುತ್ತಾರೆ.

ಕರ್ನಾಟಕ ಉಚ್ಚ ನ್ಯಾಯಾಲಯವು ಪ್ರಕರಣದ ಸಮಗ್ರ ವಿಚಾರಣೆ ನಡೆಸಿ ಸರ್ವೆ ಇಲಾಖೆಯಿಂದ ಅಳತೆ ಮಾಡಿಸಿ ರಸ್ತೆ ಸ್ಥಳ ಯಾರಿಗೆ ಬರುತ್ತದೆ ಎಂಬುದನ್ನು ಗಮನಿಸಿ ಸೂಕ್ತ ಆದೇಶ ಮಾಡುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಎಚ್ಚರಿಸಿ ಚಂದು ಮಡಿವಾಳತಿಯವರ ಪರವಾಗಿ ಆದೇಶ ಮಾಡುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ಬಂದ ತಕ್ಷಣ ಬೇಳೂರು ಗ್ರಾಮ ಪಂಚಾಯತ್ ಇವರು ಇವರ ವಾಣಿಜ್ಯ ಕಟ್ಟಡಕ್ಕೆ ಶಾಶ್ವತ ವಿದ್ಯುತ್ ಸಂಪರ್ಕವನ್ನು ನೀಡುತ್ತಾರೆ. ಆದರೆ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವಿದ್ದರೂ ಕೂಡ ಇದುವರೆಗೂ ಕೂಡ ಚಂದು ಮಡಿವಾಳತಿ ಇವರಿಗೆ ಶಾಶ್ವತ ಡೋರ್ ನಂಬರ್ ಸಿಕ್ಕಿರುವುದಿಲ್ಲ. ದಿನಾಂಕ 25.07.2024 ರಂದು ನಡೆದ ಗ್ರಾಮ ಸಭೆಯಲ್ಲಿ ನ್ಯಾಯವಾದಿ ಅವಿನಾಶ್ ಶೆಟ್ಟಿ ಇವರು ದಾಖಲೆಗಳ ಸಮೇತವಾಗಿ ಪ್ರಸ್ತುತ ಅಧ್ಯಕ್ಷರಾದ ಇವರ ಹಗರಣವನ್ನು ಗ್ರಾಮಸ್ಥರ ಮುಂದೆ ಸವಿವರವಾಗಿ ವಿವರಿಸಿದರು. ಪ್ರಸ್ತುತ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಶೀಲ ಶೆಟ್ಟಿ ಇವರು ಅವರ ವಾರ್ಡಿನಲ್ಲಿ ರಸ್ತೆ ಮಾರ್ಜಿನ್ ನಲ್ಲಿ ಭೂ ಪರಿವರ್ತನೆ ಮಾಡದೆ ಪಂಚಾಯತ್ ಪರವಾನಿಗೆ ಪಡೆಯದೆ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿದ್ದಾರೆ. ಚಂದು ಮಡಿವಾಳರಿಗೆ ಮಾಡಿದ ಕಾನೂನು ಕ್ರಮಗಳು ಪ್ರಸ್ತುತ ಅಧ್ಯಕ್ಷರಿಗೂ ಜಾರಿಯಾಗಬೇಕು. ಅಧ್ಯಕ್ಷರಿಗೂ ಒಂದೇ ಕಾನೂನು ಸಾಮಾನ್ಯ ಪ್ರಜೆಗೂ ಒಂದೇ ಕಾನೂನು ಎಂಬ ವಿಚಾರವನ್ನು ಗ್ರಾಮಸ್ಥರ ಮುಂದೆ ವಿವರವಾಗಿ ತಿಳಿಸಿದರು.