
ಡೈಲಿ ವಾರ್ತೆ:JAN/13/2026
ಮಂದಾರ್ತಿ| ಹೆಗ್ಗುಂಜೆ ಮನೆ ತೆರವು ಸ್ಥಳಕ್ಕೆ ಸಂಸದ, ಹಾಗೂ ಶಾಸಕ ಭೇಟಿ: ಇಂದು ತಹಸೀಲ್ದಾರ್ ಕಛೇರಿ ಮುಂದೆ ಪ್ರತಿಭಟನೆ

ಬ್ರಹ್ಮಾವರ: ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಸ್ಥಳದಲ್ಲಿ ನಿರ್ಮಿಸಲಾದ ಮನೆ ಮತ್ತು ಶೆಡ್ಗಳನ್ನು ತೆರವುಗೊಳಿಸಿದನ್ನು ಪ್ರಶ್ನಿಸಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಶುಕ್ರವಾರ ತೆರವು ಕಾರ್ಯಾಚರಣೆಗೆಂದು ಬಂದಿದ್ದ ತಹಶಿಲ್ದಾರರಿಗೆ ಶಾಸಕರು ಮತ್ತು ಸಂಸದರು ಕೆಲವು ದಿನಗಳ ಕಾಲ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಆದರೂ ಏಕಾಎಕಿ ಸೋಮವಾರ ಬೆಳ್ಳಂಬೆಳಿಗ್ಗೆ ಜೆಸಿಬಿ ತಂದು ಅಲ್ಲಿದ್ದ ಎಲ್ಲಾ ಮನೆಗಳನ್ನ ಧ್ವಂಸಗೊಳಿಸಿದ್ದಾರೆ.

ಸರಕಾರಿ ಜಾಗದಲ್ಲಿ ಕೋಟಿಗಟ್ಟಲೇ ಮನೆ ಕಟ್ಟಿಕೊಂಡವರಿದ್ದಾರೆ, ಆದರೆ ನಮ್ಮ ಅಧಿಕಾರಿಗಳಿಗೆ ಬಡವರ ಮನೆ ಮೇಲೆ ಕಣ್ಣು. 20 ವರ್ಷಗಳಿಗೂ ಮಿಕ್ಕಿ ವಾಸ್ತವ್ಯ ಇದ್ದ ಇವರ ಮನೆಗಳನ್ನು ಕೆಡವಿದ್ದು ನಿಜಕ್ಕೂ ಆಕ್ಷೇಪಾರ್ಹ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೇ ಭೇಟಿ ಸಂತ್ರಸ್ಥ ಕುಟುಂಬದ ಜೊತೆ ಮಾತನಾಡಿದ ಶಾಸಕರು ಮತ್ತು ಸಂಸದರು, ನ್ಯಾಯ ಕೊಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ 48ಸಾವಿರ 94c ಮತ್ತು cc ಅರ್ಜಿಗಳು ಬಾಕಿ ಇದೆ. ಇದರಲ್ಲಿ ಸುಮಾರು 38ಸಾವಿರ ಅರ್ಜಿಗಳು ಇನ್ನೂ ಹಕ್ಕು ಪತ್ರ ನೀಡಿಲ್ಲ. ಬೆಳ್ಳೆ ನಾಯ್ಕ ಮತ್ತು ಶೇಖರ ನಾಯ್ಕರ ಮನೆ ತೆರವುಗೊಳಿಸಿದ್ದು ಈ ಬಾಕಿ ಇರುವ 38ಸಾವಿರ ಅರ್ಜಿಗಳನ್ನೂ ತೆರವುಗೊಳಿಸಿದ ರೀತಿಯೇ ಆಗಿದೆ.ಮನೆ ಕಟ್ಟಿಕೊಳ್ಳಬೇಕೆಂಬುದು ಪ್ರತಿ ಕುಟುಂಬದ ಕನಸು. ಅದನ್ನು ತಹಶಿಲ್ದಾರರು ನುಚ್ಚುನೂರು ಮಾಡಿದ್ದಾರೆ. ಇದಕ್ಕೆ ನಾಳೆ ಪ್ರತಿಭಟನೆ ಮೂಲಕ ಉತ್ತರ ನೀಡೋಣ ಎಂದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಯಾರ ಆಣತಿ ಮೇರೆಗೆ ಈ ಕ್ರಮ ನಡೆದಿದೆ ಎನ್ನುವುದು ನಮಗೆ ಗೊತ್ತಿದೆ. ಈ ಒತ್ತಡ ಹೇರಿದವರಿಗೆ ಸಂಬಂಧಪಟ್ಟ ಮನೆಗಳೂ ಕೂಡ ಸರಕಾರಿ ಜಾಗದಲ್ಲಿದೆ. ಈ ಕುಟುಂಬಗಳಿಗೆ ನ್ಯಾಯ ದೊರಕುವವರೆಗೂ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ನಾಳೆ ತಹಶಿಲ್ದಾರರಿಂದ ಸರಿಯಾದ ಉತ್ತರ ಸಿಗುವ ವರೆಗೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಮಂಗಳವಾರ ಬೆಳಗ್ಗೆ 10:00ಕ್ಕೆ ಬ್ರಹ್ಮಾವರ ತಹಶಿಲ್ದಾರರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಈ ಸಂದರ್ಭ ಮುಖಂಡರಾದ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ,, ಗುರುಪ್ರಸಾದ್, ಕಾಡೂರು ಸುರೇಶ್ ಶೆಟ್ಟಿ, ಸ್ಥಳೀಯ ಗ್ರಾಮಪಂಚಾಯತ್ ಸದಸ್ಯರು, ಮೊದಲಾದವರು ಇದ್ದರು