ಡೈಲಿ ವಾರ್ತೆ: 30/ಜುಲೈ /2024
ಚಿಕ್ಕಮಗಳೂರು: ಮತ್ತೆ ಗುಡ್ಡ ಕುಸಿತ, ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಬಂದ್!
ಚಿಕ್ಕಮಗಳೂರು: ವಾಹನ ಸವಾರರಿಗೆ ಥ್ರಿಲ್ ನೀಡುವ ಚಾರ್ಮಾಡಿ ಘಾಟ್ನಲ್ಲಿ ಪ್ರತಿ ವರ್ಷವೂ ಮಳೆಯಾದಾಗ ಗುಡ್ಡ ಕುಸಿತ ಆಗುತ್ತಲೇ ಇರುತ್ತದೆ. ಇದೀಗ ರಾಷ್ಟ್ರೀಯ ಹೆದ್ದಾರಿ 173 ರಲ್ಲಿರುವ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ.
ಗುಡ್ಡ ಕುಸಿದು ರಸ್ತೆಗೆ ಅಡ್ಡಲಾಗಿ ಮಣ್ಣು, ಮರ ಬಿದ್ದಿದೆ. ಹೀಗಾಗಿ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.
ಚಿಕ್ಕಮಗಳೂರು-ದಕ್ಷಿಣ ಕನ್ನಡಕ್ಕೆ ಸಂಪರ್ಕಿಸುವ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತ ಹಿನ್ನೆಲೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಕೊಟ್ಟಿಗೆಹಾರ, ಬೆಳ್ತಂಗಡಿ ಬಳಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಚಾರ್ಮಾಡಿ ಘಾಟಿಗೆ ತೆರಳದಂತೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಕಿರಿದಾದ ಅಪಾಯಕಾರಿ ರಸ್ತೆಯಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿದೆ.
ಭದ್ರಾ ಆರ್ಭಟಕ್ಕೆ ಸೇತುವೆ ಸಂಪೂರ್ಣ ಮುಳುಗಡೆ:
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಬಾಳೆಹೊನ್ನೂರು-ಕಳಸ ಸಂಪರ್ಕಿಸುವ ಮಹಲ್ಗೋಡು ಸೇತುವೆ ಮುಳುಗಿದೆ. ಭದ್ರಾ ಆರ್ಭಟಕ್ಕೆ ಸೇತುವೆ ಸಂಪೂರ್ಣ ಮುಳುಗಿದೆ. ಮಾಗುಂಡಿ ಗ್ರಾಮ ದ್ವೀಪದಂತಾಗಿದೆ. ಮಾಗುಂಡಿಯಿಂದ ಹುಯಿಗೆರೆ, ಬಿಕ್ಕರಣೆ, ಮಣಬೂರು, ಸಾರಗೋಡು, ಕರಗಣೆ ಸಂಪರ್ಕ ಬಂದ್ ಆಗಿದೆ.