ಡೈಲಿ ವಾರ್ತೆ: 30/ಜುಲೈ /2024

ಕೇರಳ: ವಯನಾಡ್‌ನಲ್ಲಿ ಭೀಕರ ಭೂಕುಸಿತ – 7 ಮಂದಿ ಸಾವು, ನೂರಾರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ.!

ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಭೀಕರ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಈವರೆಗೆ ಏಳು ಮಂದಿ ಮೃತಪಟ್ಟಿರುವುದಾಗಿ ಮಲಯಾಳಂ ಮಾಧ್ಯಮಗಳು ವರದಿ ಮಾಡಿದೆ.

ವಯನಾಡ್ ಜಿಲ್ಲೆಯ ಮೇಪ್ಪಾಡಿ, ಮುಂಡಕೈ ಪಟ್ಟಣ ಮತ್ತು ಚೂರಲ್ ಮಲ ಎಂಬ ಮೂರು ಪ್ರದೇಶದಲ್ಲಿ ಇಂದು ಬೆಳಗ್ಗಿನ‌ ಜಾವ ಭಾರೀ ಭೂಕುಸಿತ ಸಂಭವಿಸಿದೆ.

ಮುಂಡಕೈ ಪೇಟೆಯಲ್ಲಿ ಬೆಳಗಿನ ಜಾವ ಸರಿಸುಮಾರು 4 ಗಂಟೆ ಸುಮಾರಿಗೆ ಸುರಿದ ಭಾರೀ ಮಳೆಗೆ ಮೊದಲ ಭೂಕುಸಿತ ಸಂಭವಿಸಿದೆ. ಇದರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಚೂರಲ್ ಮಲ ಶಾಲೆಯ ಬಳಿ ಎರಡನೇಯ ಭೂಕುಸಿತ ಸಂಭವಿಸಿದೆ.

ಸ್ಥಳೀಯ ಮಾಧ್ಯಮಗಳು ಮಾಡಿದ ವರದಿಯ ಪ್ರಕಾರ, ಶಾಲೆ ಕೂಡ ಭಾಗಶಃ ಕೊಚ್ಚಿ ಹೋಗಿವೆ. ಜಲಸ್ಪೋಟದಲ್ಲಿ ಬಂಡೆ ಕಲ್ಲುಗಳು ಕೊಚ್ಚಿಕೊಂಡು ಹೋಗಿದ್ದರಿಂದ ಹೆಚ್ಚಿನ ಪ್ರಮಾಣದ ನಾಶ, ನಷ್ಟ ಸಂಭವಿಸಿದೆ. ಅಂಗಡಿ, ಮನೆಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದವು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಒಟ್ಟು ಮೂರು ಕಡೆಗಳಲ್ಲಿ ಭಾರೀ ಭೂಕುಸಿತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಈವರೆಗೆ ಏಳು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ಪ್ರದೇಶದಲ್ಲಿ ಸುಮಾರು 400 ಕುಟುಂಬಗಳು ವಾಸಿಸುತ್ತಿದ್ದು, ಭೂಕುಸಿತ ಉಂಟುಮಾಡಿದ ನಾಶ, ನಷ್ಟದಿಂದಾಗಿ ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.
ಅನೇಕ ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಪ್ರದೇಶದ ಮುಖ್ಯ ರಸ್ತೆ ಮತ್ತು ಚೂರಲ್ ಮಲ ಪಟ್ಟಣದ ಸೇತುವೆ ಹಾನಿಗೊಳಗಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದೆ.

ಮುಂಡಕೈ ಅಟ್ಟಮಲ ಪ್ರದೇಶಕ್ಕೆ ಇದು ಏಕೈಕ ಸೇತುವೆಯಾಗಿದೆ. ಭೂ ಕುಸಿತದ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಕಾರ್ಯಾಚರಣೆ ನಡೆಸುವವರಿಗೂ ಕೂಡ ಭಾರೀ ಸಂಕಷ್ಟ ಎದುರಾಗಿದೆ. ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಾಸಕ ಟಿ.ಸಿದ್ದೀಕ್ ಮತ್ತು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿವೆ.