ಡೈಲಿ ವಾರ್ತೆ: 31/ಜುಲೈ /2024
ಬೆಂಗಳೂರಿಗೆ ಮಾರಾಟಕ್ಕೆಂದು ತಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ: ಸರ್ಕಾರದ ಕೈ ಸೇರಿದ ಲ್ಯಾಬ್ ರಿಪೋರ್ಟ್!
ಬೆಂಗಳೂರು: ನಾಯಿ ಮಾಂಸ ಮಾರಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ರಿಪೋರ್ಟ್ ಸರ್ಕಾರದ ಕೈ ಸೇರಿದೆ.
ಮಾಂಸ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (FSL) ಆಯುಕ್ತ ಕೆ ಶ್ರೀನಿವಾಸ್, ಆಹಾರ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ವರದಿ ಸಲ್ಲಿಸಿದ್ದಾರೆ.
ಮಾಂಸದ ಸ್ಯಾಂಪಲ್ ಟೆಸ್ಟಿಂಗ್ ವರದಿಯನ್ನು ಆಹಾರ ಇಲಾಖೆ ಪ್ರಕಟಿಸಿದೆ. ಇದು ನಾಯಿ ಮಾಂಸ ಅಲ್ಲ, ಶಿರೋಹಿ ತಳಿಯ ಕುರಿ ಮಾಂಸ ಎಂದು ವರದಿ ತಿಳಿಸಿದೆ.
ನಾಯಿ ಮಾಂಸವನ್ನು ತರಿಸಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಆ್ಯಂಡ್ ಟೀಮ್ ಹಬ್ಬಿಸಿದ್ದ ಸುಳ್ಳು ವ್ಯಾಪಕವಾಗಿ ಹರಡಿತ್ತು. ಇದರಿಂದಾಗಿ ಮಟನ್ ಅಂಗಡಿ ಹೊಟೇಲ್ ಗಳಿಗೆ ಹೋಗಲು ಸಾರ್ವಜನಿಕರು ಹಿಂದೇಟು ಹಾಕುವಂತಾಗಿತ್ತು.
ಕುರಿ ಮಾಂಸದ ಜತೆ ನಾಯಿ ಮಾಂಸ ಬೆರೆಸಲಾಗಿದೆ ಎಂಬ ಆರೋಪ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ರಾಷ್ಟ್ರೀಯ ಮಟ್ಟದಲ್ಲೂ ಇದು ಸುದ್ದಿಯಾಗಿತ್ತು. ಸದ್ಯ ಲ್ಯಾಬ್ ರಿಪೋರ್ಟ್ನಲ್ಲಿ ಕುರಿ ಮಾಂಸ ಅನ್ನೋದು ದೃಢವಾಗಿದ್ದು, ಮಾಂಸದ ಬಗ್ಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಸ್ಪಷ್ಟನೆ ನೀಡಿದೆ.
ಪುನೀತ್ ಕೆರೆಹಳ್ಳಿ ವಿರುದ್ಧ ಕ್ರಮ ಸಾಧ್ಯತೆ!
ಕುರಿ ಮಾಂಸವನ್ನು ನಾಯಿಯ ಮಾಂಸ ಅಂತ ಅಪಪ್ರಚಾರ ನಡೆಸಿ ವ್ಯಾಪಾರಿಗಳಿಗೆ ನಷ್ಟ ಉಂಟು ಮಾಡಿರುವ ಪುನೀತ್ ಕೆರೆಹಳ್ಳಿ ಹಾಗೂ ತಂಡದ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸುಳ್ಳು ವದಂತಿಗಳನ್ನು ಹಬ್ಬಿಸಿ ಸಾರ್ವಜನಿಕ ಸ್ಥಳದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿದ್ದಲ್ಲದೇ, ಸಂಶಯದ ವಾತಾವರಣ ಸೃಷ್ಟಿಸಲಾಗಿತ್ತು. ಮಾಂಸ ವ್ಯಾಪಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಕಂಡು ಬಂದಿದೆ.
ಹೈದರಾಬಾದ್ನ ನ್ಯಾಷನಲ್ ಮೀಟ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪರೀಕ್ಷೆ ಮಾಡಲಾಗಿದೆ. ಲ್ಯಾಬ್ ನಲ್ಲಿ S Ovis Aries ಎಂದು ಕುರಿಯ ವೈಜ್ಞಾನಿಕ ಹೆಸರನ್ನು ನೀಡಲಾಗಿದೆ. ಈ ಮೂಲಕ ಇದು ಕುರಿ ಮಾಂಸವೇ ಎನ್ನುವುದು ಸಾಬೀತಾಗಿರುವುದಾಗಿ ಇಲಾಖೆ ಆಯುಕ್ತ ಶ್ರೀನಿವಾಸ್ ಅಧಿಕೃತವಾಗಿ ಹೇಳಿದ್ದಾರೆ.