ಡೈಲಿ ವಾರ್ತೆ: 31/ಜುಲೈ /2024
ನಾಗೂರು: ಮನೆಯ ಬಾವಿಯಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಮೊಸಳೆ – ಅರಣ್ಯ ಇಲಾಖೆ, ಮೀನುಗಾರರ ಹರಸಾಹಸದಿಂದ ಸೆರೆ!
ಕುಂದಾಪುರ: ನಾಗೂರು ಸಮೀಪದ ಕೊಡೇರಿ ವಡೇರ ಮಠ ವಿಶ್ವನಾಥ ಉಡುಪರ ಮನೆಯ ಕುಡಿಯುವ ನೀರಿನ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು.
ಆ ಮೊಸಳೆಯನ್ನು ಹಿಡಿಯಲು ನಿನ್ನೆಯಿಂದ ಅರಣ್ಯಾಧಿಕಾರಿಗಳು, ಅಗ್ನಿಶಾಮಕದಳ ಸಿಬ್ಬಂದಿಗಳು ಹರಸಾಹಸ ಪಟ್ಟು ವಿಫಲಗೊಂಡರು. ಆದರೆ ಇಂದು ಸ್ಥಳೀಯ ಮೀನುಗಾರರು ಸಾಥ್ ನೀಡಿದರು.
ಮೀನುಗಾರ ಮಂಜು ಖಾರ್ವಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಬೃಹತ್ ಗಾತ್ರದ ಮೊಸಳೆಯನ್ನು ಬಲೆಗೆ ಕೆಡವಿ ಕೊನೆಗೂ ಸೆರೆ ಹಿಡಿಯಲಾಯಿತು.
ಮೀನುಗಾರರು ಮೊಸಳೆಯನ್ನು ಸೆರೆ ಹಿಡಿದ ಬಳಿಕ ಪಶುವೈದ್ಯರು ಅದರ ಆರೋಗ್ಯ ತಪಾಸಣೆ ನಡೆಸಿ ಅದನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಯಿತು.
ಈ ಪರಿಸರದಲ್ಲಿ ಕೆಲವು ದಿನಗಳ ಹಿಂದೆ ಭಾರೀ ನೆರೆ ಕಾಣಿಸಿಕೊಂಡಿದ್ದು ಮೊಸಳೆ ನದಿ ಅಥವಾ ಸಮುದ್ರದ ನೀರಿನೊಂದಿಗೆ ಕೊಚ್ಚಿಕೊಂಡು ಬಂದು ತೋಟದ ಬಾವಿ ಸೇರಿಕೊಂಡಿದೆ.
ಮೊಸಳೆ ನೋಡಲು ಗ್ರಾಮದ ನೂರಾರು ಕುತೂಹಲಿಗರು ಆಗಮಿಸಿದ್ದು, ಅದನ್ನು ಸೆರೆ ಹಿಡಿಯುವುದರೊಂದಿಗೆ ಅವರೆಲ್ಲ ನಿಟ್ಟುಸಿರು ಬಿಟ್ಟರು.