ಡೈಲಿ ವಾರ್ತೆ: 05/ಆಗಸ್ಟ್/2024
ಬೆಂಗಳೂರು: ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ನೇಣುಬಿಗಿದು ಆತ್ಮಹತ್ಯೆಗೆ ಶರಣು
ರಾಮನಗರ: ಪಿಎಸ್‌ಐ ಪರಶುರಾಮ್ ಸಾವು ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಕುಂಬಳಗೂಡು ಬಳಿ ನಡೆದಿದೆ.
ಬೆಂಗಳೂರು ಸಿಸಿಬಿ ಅಪರಾಧ ವಿಭಾಗದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತಿಮ್ಮೇಗೌಡ ಎಂದು ತಿಳಿದುಬಂದಿದೆ.
ಅವರು ಕುಂಬಳಗೂಡು ಬಳಿಯ ಖಾಸಗಿ ಲೇಔಟ್‌ನಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಈ ಹಿಂದೆ ಬಿಡದಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದರು.
ಸ್ಥಳಕ್ಕೆ ತಿಮ್ಮೇಗೌಡ ಅವರ ಕುಟುಂಬಸ್ಥರು ಬಂದಿದ್ದಾರೆ. ಸ್ಥಳದಲ್ಲಿ ಸದ್ಯ ಯಾವುದೇ ಡೆತ್ ನೋಟ್ ದೊರೆತಿಲ್ಲ. ಲೋಕಾಯುಕ್ತದಲ್ಲಿ ತಿಮ್ಮೇಗೌಡ ಅವರ ವಿರುದ್ಧ ಇತ್ತೀಚೆಗೆ ಪ್ರಕರಣವೊಂದು ದಾಖಲಾಗಿತ್ತು. ಅಲ್ಲದೇ ಅತ್ತಿಬೆಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ತಿಮ್ಮೇಗೌಡ ಅವರು ಅಮಾನತುಗೊಂಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತನಿಖೆ ನಡೆಯುತ್ತಿದೆ. ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.