ಡೈಲಿ ವಾರ್ತೆ: 05/ಆಗಸ್ಟ್/2024

ಬಂಟ್ವಾಳ: ಅಕ್ರಮ ಗಣಿಗಾರಿಕೆಗೆ ತಡೆ – ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಎಫ್ ಐ ಆರ್ ದಾಖಲು:
ದೂರುದಾರರಿಗೆ ಸಹಕರಿಸಿದ ಆರ್ ಟಿಐ ಕಾರ್ಯಕರ್ತರ ವಿರುದ್ಧ ಮಾನಹಾನಿ – ದೂರು ದಾಖಲು

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಯ್ಯರ ಬೈಲ್ ಎಂಬಲ್ಲಿ ಅಕ್ರಮವಾಗಿ ಗಣಿ ಗಾರಿಕೆ ನಡೆಸುತ್ತಿದ್ದವರ ವಿರುದ್ಧ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಪ್ರಕರಣ ದಾಖಲಿಸಿದೆ.

ಬಂಟ್ವಾಳ ಮಯ್ಯರ ಬೈಲ್ ನಲ್ಲಿ ಸುಲೇಮಾನ್ ಹಾಗೂ ಧನುಷ್ ಎಂಬವರು ಯಾವುದೇ ಲೈಸೆನ್ಸ್, ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಪ್ಪು ಕಲ್ಲುಗಳನ್ನು ಸ್ಪೋಟಿಸಿ, ಜಲ್ಲಿ ಮಾಡಿ, ಲಾರಿಗಳ ಮೂಲಕ ಕೇರಳಕ್ಕೆ ಸಾಗಾಟ ಮಾಡುತ್ತಿದ್ದರು. ಕಲ್ಲು ಸ್ಪೋಟ ಮಾಡಿದ್ದರಿಂದಾದ ಅದುರುವಿಕೆಯಿಂದ ನಾಲ್ಕು ಮನೆಗಳ ಗೋಡೆ ಬಿರುಕುಗೊಂಡು ಬೀಳುವ ಪರಿಸ್ಥಿತಿ ಉಂಟಾಗಿತ್ತು. ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಬಿರುಕುಗೊಂಡ ಮನೆಗಳು ಯಾವ ಕ್ಷಣದಲ್ಲಾದರೂ ಕುಸಿದು ಪ್ರಾಣ ಹಾನಿಯಾಗುವ ಭೀತಿ ತಲೆದೋರಿತ್ತು. ಇದರ ವಿರುದ್ಧ ಮನೆಯರಾದ ಕೃಷ್ಣ ಕುಮಾರ್ ಸೋಮಯಜಿ, ಪದ್ಮನಾಭ ಮೂಲ್ಯ, ಸಂತೋಷ, ಹಾಗೂ ಆನಂದ ಇವರು ದ. ಕ. ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡಿದ್ದರು.

ಆದರೆ, ಅಕ್ರಮ ಗಾಣಿಗರಿಕೆಯವರ ಪ್ರಭಾವ ಎಷ್ಟಿತ್ತೆಂದರೆ, ಅಧಿಕಾರಿಗಳು ಈ ದೂರುಗಳಿಗೆ ಕವಡೆ ಕಿಮ್ಮತ್ತೂ ಕೊಡದೆ ಜಾಣ ಕುರುಡು ಪ್ರದರ್ಶಿಸಿದರು!

ಸಂತ್ರಸ್ತರ ಬವಣೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಮನಗಂಡ ಡೈಲಿ ವಾರ್ತೆ” ಮಯ್ಯರ ಬೈಲು ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಫೋಟೋ, ವಿಡಿಯೋ ಸಹಿತ ವರದಿ ಪ್ರಕಟಿಸಿತು.

ತಕ್ಷಣ ಗಾಢ ನಿದ್ದೆಯಿಂದೆದ್ದ ಅಧಿಕಾರಿಗಳು ಇದೀಗ
ಆ ದೂರಿನನ್ವಯ ಕ್ರಮಕ್ಕೆ ಮುಂದಾಗಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅಕ್ರಮವಾಗಿ ಗಣಿ ಗಾರಿಕೆ ಮಾಡುತ್ತಿದ್ದ ಸುಲೇಮಾನ್, ಹರೀಶ್ ಶೆಟ್ಟಿ, ಉಮೇಶ್ ಇವರ ಮೇಲೆ ಎಫ್ ಐ ಆರ್ ದಾಖಲಿಸಿ, ಅಕ್ರಮ ಗಣಿ ಗಾರಿಕೆ ಬಂದ್ ಮಾಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರಿಗೆ ಕಿರುಕುಳ :
ಅಕ್ರಮ ಗಣಿಗಾರಿಕೆ ವಿರುದ್ಧ ದೂರು ನೀಡಲು ಮಯ್ಯರ ಬೈಲು ಸಂತ್ರಸ್ತರಿಗೆ ಸಹಕರಿಸಿ ಅಕ್ರಮ ಗಣಿಗಾರಿಕೆಯನ್ನು ಬಯಲಿಗೆಳೆದ ಸಮಾಜ ಸೇವಕ, ಬಿಜೆಪಿ ಕಾರ್ಯಕರ್ತ ಹಾಗೂ ಆರ್ ಟಿ ಐ ಕಾರ್ಯಕರ್ತ ಖಾಲಿದ್ ನಂದಾವರ ಮತ್ತು ಇಕ್ಬಾಲ್ ರವರ ಬಗ್ಗೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ, ಸುಳ್ಳು ಸುದ್ದಿ ಪ್ರಕಟಿಸಿ ಮಾನಹಾನಿ ಮಾಡುವ ಸಂಚು ನಡೆಸಿದ್ದಾರೆ. ಈ ಬಗ್ಗೆ ಸುಲೇಮಾನ್ ಮತ್ತು ಧನುಷ್ ಎಂಬವರ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.