


ಡೈಲಿ ವಾರ್ತೆ: 26/ಆಗಸ್ಟ್/ 2025


ಗಡಿನಾಡಿನಲ್ಲಿ ಗಣೇಶ ಮೂರ್ತಿ ತಯಾರಿಸಿ ಕೋಮುಸೌಹಾರ್ದ ಸಂದೇಶ ಸಾರುತ್ತಿರುವ ಮುಸ್ಲಿಂ ಕುಟುಂಬ – ಶಿಕ್ಷಣದ ನಡುವೆಯು ಗಣಪತಿ ವಿಗ್ರಹವನ್ನು ರಚಿಸುವ ಕಲಾಕಾರ ಶಿಕ್ಷಕ, ಇವರು ಹಿಂದೂ ಸಂಸ್ಕೃತಿಯ ಆರಾಧಕ.!


“ಗಣೇಶ ಚತುರ್ಥಿ ಬಂತೆಂದರೆ ಈ ಕುಟುಂಬ ಸಂಭ್ರಮಿಸುತ್ತದೆ. ಇವರು ತಯಾರಿಸುವ ವಿಗ್ರಹಗಳು ಸಾವಿರಕ್ಕೂ ಹೆಚ್ಚು ಮಾರಾಟವಾಗುತ್ತದೆ. ರಾತ್ರಿ ಹಗಲಿನದೇ ಸಿದ್ದಪಡಿಸುವ ಗಣೇಶನ ಮೂರ್ತಿಗಳು ಪ್ರತಿ ಹಿಂದುಗಳ ಪಾಲಿಗೆ ವರವಾಗಿದೆ. ಆದರೆ ಈ ಗಣೇಶ ವಿಗ್ರಹವನ್ನು ಸಿದ್ಧಪಡಿಸುವುದು ಮಾತ್ರ ಮುಸ್ಲಿಂ ಕುಟುಂಬದವರು. ಮುಸ್ಲಿಂ ಹಿಂದೂ ಭೇದ ಭಾವ ನೋಡುತ್ತಿರುವ ಇಂದಿನ ದಿನಮಾನಸದಲ್ಲಿ ಈ ಕುಟುಂಬ ನಮಗೆ ಮಾದರಿಯಾಗಿದೆ.
ಅದು ಮುಸ್ಲಿಂ ಕುಟುಂಬ, ಅವರು ಗಣಪತಿ ದೇವರ ಆರಾಧಕರು, ಹಿಂದೂ ಮುಸ್ಲಿಂ ಎಂದು ಹೊಡೆದಾಡುವ ಇಂದಿನ ಸಮಾಜದಲ್ಲಿ ಈ ಮುಸ್ಲಿಂ ಕುಟುಂಬ ಮಾದರಿಯಾಗಿದೆ. ಸಮಾಜದಲ್ಲಿ ಸಮಾನತೆಯನ್ನ ಸಾರುವ ಉದ್ದೇಶದಿಂದ ಮತ್ತು ಏಕತೆ ಭಾವನೆ ಸೃಷ್ಟಿಸುವ ಈ ಕಾಲದಲ್ಲಿ ಹಿಂದೂ ಮುಸ್ಲಿಂ ಬೇದ ಭಾವ ಇಲ್ಲದೆ ಗಣಪತಿ ಮೂರ್ತಿಯನ್ನು ಸಿದ್ಧಪಡಿಸಿ ಸಾರ್ವಜನಿಕವಾಗಿ ಮಾರಾಟ ಮಾಡುವ ವಿಶೇಷ ಸನ್ನಿವೇಶ ಚಿಕ್ಕೋಡಿಯಲ್ಲಿ ಕಂಡಿದೆ. ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ಸಾರ್ವಜನಿಕರನ್ನ ಆಕರ್ಷಿಸುತ್ತಿದೆ. ಪ್ರತಿ ವರ್ಷವೂ ಗಣೇಶನನ್ನ ಸಿದ್ಧಪಡಿಸುವಾಗ ಜೇಡಿ ಮಣ್ಣಿನ ಪ್ರಕಾರತೆ ಗಳನ್ನು ತಂದು ಚಿಂತೆಪಡಿಸಿ, ಸಾರ್ವಜನಿಕರಿಗೆ ಬಣ್ಣಬಣ್ಣದ ರೂಪದಲ್ಲಿ ಗಣೇಶ ಮೂರ್ತಿಯನ್ನ ಮಾರಾಟ ಮಾಡಿ ಗಣೇಶ ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಾರೆ ಮುಸ್ಲಿಂ ಕುಟುಂಬ.
ಬಣ್ಣ-ಬಣ್ಣದ ಗಣೇಶ ಮೂರ್ತಿಗಳು, ಒಂದೆಡೆ ತಲೆ ಮೇಲೆ ಟೋಪಿ ಹಾಕಿಕೊಂಡು ವಿಘ್ನೇಶ್ವರನ ಮೂರ್ತಿಗೆ ಫೈನಲ್ ಟಚ್ ನೀಡುತ್ತಿರುವ ಕುಟುಂಬಸ್ಥರು. ಈ ಸನ್ನಿವೇಶ ಕಂಡು ಬಂದಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದ ಅಲ್ಲಾಭಕ್ಷ ಜಮಾದಾರ್ ಎಂಬ ಮುಸ್ಲಿಂ ಶಿಕ್ಷಕನ ಮನೆಯಲ್ಲಿ.
ಗಣೇಶ ಚತುರ್ಥಿ ಬರುವ ಎರಡು ತಿಂಗಳು ಮುಂಚೆಯೇ ಜಮಾದಾರ್ ಕುಟುಂಬಸ್ಥರು ಗಣೇಶ ಮೂರ್ತಿ ತಯಾರಿಸುವ ಕೆಲಸ ಶುರು ಮಾಡುತ್ತಾರೆ. ಒಬ್ಬರು ಮಣ್ಣು ಹದ ಮಾಡಿದರೆ, ಇನ್ನೊಬ್ಬರು ಮೂರ್ತಿಗೆ ಬೇಕಾದ ಸೊಂಡಿಲು, ಕೈ ಹಾಗೂ ಕಿರೀಟ ರಚಿಸುತ್ತಾರೆ. ಮನೆಯ ಹೆಣ್ಣು ಮಕ್ಕಳೂ ಸಹ ಈ ಪ್ರಕ್ರಿಯೆಯಲ್ಲಿ ಕೈಜೋಡಿಸುತ್ತಾರೆ. ಪ್ರಸಕ್ತ ವರ್ಷದಲ್ಲಿ ಜಮಾದಾರ್ ಕುಟುಂಬ ಸುಮಾರು 250 ರಿಂದ 300 ಗಣೇಶ ಮೂರ್ತಿಗಳನ್ನು ತಯಾರಿಸಿದೆ. ಧರ್ಮ ಬೇಧದ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಜನರ ನಡುವೆ ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಗಣೇಶನ ಮೂರ್ತಿ ತಯಾರಕರಾಗಿ ಗಡಿ ಜಿಲ್ಲೆಯ ಮುಸ್ಲಿಂ ಶಿಕ್ಷಕರೊಬ್ಬರು ಹಿಂದೂ-ಮುಸ್ಲಿಂ ಭಾವೈಕ್ಯತೆಗೂ ಶ್ರಮಿಸುತ್ತಿದ್ದಾರೆ.
ಮುಸ್ಲಿಂ ಕುಟುಂಬವೊಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಕೋಮು ಸೌಹಾರ್ದ ಸಂದೇಶ ಸಾರುತ್ತಿರುವುದಕ್ಕೆ ಮಾಂಜರಿವಾಡಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಜಮಾದಾರ್ ಕುಟುಂಬ ತಯಾರಿಸುವ ಗಣಪತಿ ಮೂರ್ತಿಗಳನ್ನು ಚಿಕ್ಕೋಡಿ ತಾಲೂಕಿನ ಮಾಂಜರಿ, ಯಡೂರ, ಯಡೂರವಾಡಿ, ಶಿರಗುಪ್ಪಿ ಸೇರಿ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಕೊಂಡೊಯ್ಯುತ್ತಾರೆ. ಜಾತಿ ಧರ್ಮ ಎಂದು ಬಡಿದಾಡುವವರ ಮಧ್ಯೆ ಜಮಾದಾರ್ ಕುಟುಂಬ ಗಣೇಶ ಮೂರ್ತಿ ತಯಾರಿಸಿ ಕೋಮು ಸೌಹಾರ್ದತೆ ಮೆರೆಯುತ್ತಿರುವುದು ಶ್ಲಾಘನೀಯ.
ಹಿಂದೂ ಸಮಾಜಕ್ಕೆ ಜಾತಿನಿಂದನೆಯವರಿಗೆ ಇವರು ಮಾದರಿ: ಚಿಕ್ಕೋಡಿ ಸಮೀಪದ ಕುಟುಂಬವೊಂದರ ಯಶೋಗಾಥೆಯನ್ನು ನೋಡಿದಾಗ, ಹಿಂದೂ ಮುಸ್ಲಿಂ ಎನ್ನುವ ಭೇದ ಭಾವ ಇಲ್ಲದೆ ಪ್ರತಿ ವರ್ಷವೂ ಗಣೇಶೋತ್ಸವ ಪ್ರಾರಂಭವಾಗುವ ಒಂದು ತಿಂಗಳ ಮುಂಚಿತವಾಗಿ ಅಗಾಧ ಪ್ರಮಾಣದ ಜೇಡಿಮಣ್ಣಿನ ವಿವಿಧ ಗಣೇಶನಗಳ ವಿಗ್ರಹಗಳನ್ನ ಪ್ರತ್ಯಕ್ಷವಾಗಿ ನುರಿತವಾಗಿ ಸಿದ್ಧಪಡಿಸುವ ಇವರ ಕುಟುಂಬ ಜಿಲ್ಲೆಗೆ ಮಾದರಿಯಾಗಿದೆ. ಹಿಂದೂ ಮುಸ್ಲಿಂ ಬಾಂಧವ್ಯದ ಸಂಕೇತವನ್ನು ಸಾರುವ ಈ ಕುಟುಂಬ ಹಿಂದೂ ಕುಟುಂಬದವರೊಂದಿಗೆ ಬೆರೆಯುವ ಕ್ಷಣ ಸಂತೋಷ ಮೂಡಿಸುತ್ತದೆ. ಗಣೇಶ ಮೂರ್ತಿಯನ್ನು ಸಿದ್ಧಪಡಿಸುವಾಗ ಇವರು ಬಳಸುವಂತಹ ಉತ್ಪನ್ನಗಳು ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದು ವಾಡಿಕೆ.
ಕರ್ನಾಟಕ ಸರ್ಕಾರದಿಂದ ಹಲವು ಪ್ರಶಸ್ತಿಗಳನ್ನು ಮುಡುಗೇರಿಸಿಕೊಂಡ ಮುಸ್ಲಿಂ ಕುಟುಂಬ ಸಮಾಜಕ್ಕೆ ಮಾದರಿಯಾಗುವುದಲ್ಲದೆ ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಹೊಂದಿರುವುದು ವಿಶೇಷ. ಸಮಾಜಕ್ಕೆ ಪೂರಕವಾದ ಅಂತಹ ಸಂದೇಶವನ್ನು ಸಾರುವ ಈ ಕುಟುಂಬ ಗಣೇಶ ಚತುರ್ಥಿ ಎಂದು ಸಂಭ್ರಮ ಸಡಗರದಿಂದ ಹಿಂದುಗಳೊಂದಿಗೆ ಚತುರ್ಥಿಯ ಭಾವನೆಯನ್ನು ಮೂಡಿಸುವ ಗಣೇಶನ ವಿಗ್ರಹಗಳು ಪ್ರತಿ ಹಿಂದುಗಳ ಆಚರಣೆಯ ಪ್ರತೀಕವಾಗಿ ನಡೆದುಕೊಳ್ಳುತ್ತಿರುವುದು ವಿಶೇಷ. ಇವರ ಸಮಾಜಮುಖಿ ಚಿಂತನೆಯ ಇಂತಹ ಸನ್ನಿವೇಶಗಳು ಹಿಂದೂ ಮತ್ತು ಮುಸ್ಲಿಂ ಬಾಂಧವ್ಯದ ಬೆಸುಗೆಯನ್ನು ಮತ್ತೆ ಕಲ್ಪಿಸುತ್ತದೆ. ಇಂತಹ ಕುಟುಂಬಗಳಿಂದ ಜಾತಿ ಜಾತಿ ನಡುವಿನ ವೈಶಮ್ಯ ಕಿತ್ತೊಗೆಯಲು ಈ ಸನ್ನಿವೇಶ ನಮಗೆ ಸಂತಸ ನೀಡುತ್ತದೆ.